ಅತಿಥೇಯ ಇಂಗ್ಲೆಂಡ್ ವಿರುದ್ಧ ಜುಲೈ 1ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿ ಜಸ್ಪ್ರೀತ್ ಬುಮ್ರ ಹೆಗಲಿಗೆ ನೀಡಲಾಗಿದೆ. ಆ ಮೂಲಕ ಕಪಿಲ್ ದೇವ್ ನಂತರ ಟೆಸ್ಟ್ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ ಅಲಭ್ಯರಾದ ಹಿನ್ನೆಲೆಯಲ್ಲಿ ತಂಡದ ಕ್ಯಾಪ್ಟನ್ ಜವಾಬ್ದಾರಿಯನ್ನ ಜಸ್ಪ್ರೀತ್ ಬುಮ್ರಾಗೆ ನೀಡಲಾಗಿದೆ. ಹೀಗಾಗಿ ತಂಡದ ನಾಯಕತ್ವದ ಜೊತೆಗೆ ಕಪಿಲ್ ದೇವ್ ನಂತರ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿರುವ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ಸಹ ಜಸ್ಪ್ರೀತ್ ಬುಮ್ರ ಹೆಗಲಿಗೇರಲಿದೆ.
ಭಾರತ ತಂಡದ ಯಶಸ್ವಿ ನಾಯಕರ ಸಾಲಿನಲ್ಲಿ ಮಂಚೂಣಿಯಲ್ಲಿರುವ ಕಪಿಲ್ ದೇವ್, 1983 ರಿಂದ 1987ರವರೆಗೆ ಭಾರತ ಟೆಸ್ಟ್ ತಂಡದ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದರು. ಅಲ್ಲದೇ ಈ ಅವಧಿಯಲ್ಲಿ ಕಪಿಲ್ ದೇವ್ 111 ವಿಕೆಟ್ಗಳನ್ನ ಸಹ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಆರು ಕ್ಯಾಪ್ಟನ್ಗಳು ಮಾತ್ರವೇ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದು, ಕಪಿಲ್ ದೇವ್(111), ಸೌರವ್ ಗಂಗೂಲಿ(5), ಮನ್ಸೂರ್ ಅಲಿ ಖಾನ್ ಪಟೌಡಿ(1), ಲಾಲಾ ಅಮರ್ನಾಥ್(25), ವಿಜಯ್ ಹಜಾ಼ರೆ(8) ಹಾಗೂ ಜಿ.ಎಸ್.ರಾಮಚಂದ್(1) ವಿಕೆಟ್ ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 29 ಪಂದ್ಯಗಳನ್ನು ಆಡಿರುವ ಜಸ್ಪ್ರೀತ್ ಬುಮ್ರ, 123 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ ಎರಡು ಬಾರಿ 4 ವಿಕೆಟ್ಗಳನ್ನು ಕಬಳಿಸಿರುವ ಬುಮ್ರ, ಎಂಟು ಬಾರಿ 5 ವಿಕೆಟ್ಗಳನ್ನ ಪಡೆದಿದ್ದಾರೆ. ಇದಲ್ಲದೇ ಟಿಂ ಇಂಡಿಯಾದ ಸ್ಪೀಡ್ ಸ್ಟಾರ್ ವೆಸ್ಟ್ ಇಂಡೀಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಹ ಪಡೆದಿದ್ದು, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ನಂತರ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿದ್ದಾರೆ.