ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ನ ಆಧಾರ ಸ್ಥಂಭವಾಗಿದ್ದರು. ಏಕದಿನ ಪಂದ್ಯಗಳಲ್ಲಂತೂ ಮಿಥಾಲಿ ಇಲ್ಲದ ಮ್ಯಾಚ್ ನೆನಪೇ ಆಗುತ್ತಿಲ್ಲ. ಆದರೆ ಈಗ ಮಿಥಾಲಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿದ್ದಾರೆ. ಮತ್ತೊಬ್ಬ ಹಿರಿಯ ಆಟಗಾರ್ತಿ ಜುಲಾನ್ ಗೋಸ್ವಾಮಿ ಭವಿಷ್ಯವೂ ಅಯೋಮಯ. ಈ ಮಧ್ಯೆ ಭಾರತ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದೆ.
ಟಿ20 ಸರಣಿಯಲ್ಲಿ 2-1ರ ಜಯದ ಬಳಿಕ ಏಕದಿನ ಸರಣಿಯಲ್ಲೂ ಗೆಲ್ಲುವ ವಿಶ್ವಾಸ ಭಾರತಕ್ಕಿದೆ. ಕೆಲವೊಂದು ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಮಿಥಾಲಿ ಇರುವ ತನಕ 4ನೇ ಕ್ರಮಾಂಕ ಆಕೆಗೆ ಮೀಸಲಾಗಿತ್ತು. ಆದರೆ ಈಗ ನಾಯಕಿ ಹರ್ಮನ್ ಪ್ರಿತ್ ಕೌರ್ ಆ ಜಾಗವನ್ನು ತುಂಬಬೇಕಿದೆ. ಹರ್ಮನ್ ಈಗ ತಂಡದಲ್ಲಿರುವ ಹಿರಿಯ ಆಟಗಾರ್ತಿಯೂ ಹೌದು.
ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಬ್ಯಾಟಿಂಗ್ ಆರಂಭಿಸಿದರೆ, ಯಸ್ತಿಕಾ ಭಾಟಿಯಾ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹರ್ಲಿನ್ ಡಿಯೋಲ್ ಕೂಡ ಬ್ಯಾಟಿಂಗ್ ಆರ್ಡರ್ನಲ್ಲಿ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ರಿಚಾ ಘೋಷ್ ಮತ್ತು ಎಸ್ ಮೇಘನಾ ಕೂಡ ಬ್ಯಾಟಿಂಗ್ ಕ್ರಮಾಂಕವನ್ನು ಗಟ್ಟಿ ಗೊಳಿಸಬಲ್ಲರು. ದೀಪ್ತಿ ಶರ್ಮಾ ಆಲ್ರೌಂಡರ್ ಕೋಟಾವನ್ನು ಭರ್ತಿ ಮಾಡಲಿದ್ದಾರೆ. ಇನ್ನು ಬೌಲಿಂಗ್ನಲ್ಲಿ ದೀಪ್ತಿ, ಪೂನಂ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಪ್ರಮುಖ ಅಸ್ತ್ರಗಳು. ಕಾಮನ್ ವೆಲ್ತ್ ಟಿ20ಗೆ ಪ್ರಿಪೇರ್ ಆಗುತ್ತಿರುವ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಶ್ರೀಲಂಕಾ ವಿರುದ್ಧದ ಸರಣಿ ನಿಜಕ್ಕೂ ಅಗ್ನಿ ಪರೀಕ್ಷೆ.