ರಿಷಬ್ ಪಂತ್(146) ಸ್ಪೋಟಕ ಶತಕ ಹಾಗೂ ರವೀಂದ್ರ ಜಡೇಜಾ(83*) ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಟೀಂ ಇಂಡಿಯಾ, ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಅತಿಥೇಯ ಇಂಗ್ಲೆಂಡ್ ವಿರುದ್ದದ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ಬರ್ಮಿಂಗ್ಯ್ಹಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಶುಕ್ರವಾರದಿಂದ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 1ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ, ಮೊದಲ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕುವ ಮೂಲಕ ದಿನದ ಗೌರವ ತನ್ನದಾಗಿಸಿಕೊಂಡಿತು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ(83*) ಹಾಗೂ ಮೊಹಮ್ಮದ್ ಶಮಿ(0*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅಗ್ರ ಕ್ರಮಾಂಕದ ವೈಫಲ್ಯ:
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸಮನ್‌ಗಳು ಕೈಕೊಟ್ಟರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್(17) ಹಾಗೂ ಚೇತೇಶ್ವರ್ ಪುಜಾರ(13) ಬಹುಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಹನುಮ ವಿಹಾರಿ(20), ಶ್ರೇಯಸ್ ಅಯ್ಯರ್(15) ರನ್‌ಗಳಿಸಿ ಔಟಾದರೆ. ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ(11) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ ಭಾರತ 98 ರನ್‌ಗಳಿಗೆ ಅಕ್ರ ಕ್ರಮಾಂಕದ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ರಿಷಬ್ ಪಂತ್ ಪರಾಕ್ರಮ:
ಪ್ರಮುಖ ಬ್ಯಾಟ್ಸಮನ್‌ಗಳ ವೈಫಲ್ಯದ ನಡುವೆ ಕಣಕ್ಕಿಳಿದ ರಿಷಬ್ ಪಂತ್(146) ಬೇರೊಂದು ಆಲೋಚನೆಯಲ್ಲೇ ಬಂದಿದ್ದರು. ಇನ್ನಿಂಗ್ಸ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಪಂತ್, ಆಂಗ್ಲರ ಬೌಲರ್‌ಗಳ ಬೆವರಿಳಿಸಿದರು. ಸಂಕಷ್ಟದ ನಡುವೆ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಬೌಲರ್‌ಗಳಿಗೆ ದಿಟ್ಟ ಪ್ರತ್ಯುತ್ತರ ನೀಡುವ ಮೂಲಕ ಅಬ್ಬರಿಸಿದ ರಿಷಬ್ ಪಂತ್, ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್ ವೇಗ ಹೆಚ್ಚಿಸಿದರು. ಕೇವಲ 111 ಬಾಲ್‌ಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸ್‌ಗಳ ಮೂಲಕ 131.5ರ ಸ್ಟ್ರೈಕ್ ರೇಟ್‌ನಲ್ಲಿ 146 ರನ್‌ಗಳಿಸಿ ಔಟಾದರು. ಅಲ್ಲದೇ ರವೀಂದ್ರ ಜಡೇಜಾ ಜೊತೆಗೂಡಿ 6ನೇ ವಿಕೆಟ್‌ಗೆ 222 ರನ್‌ಗಳ ಅದ್ಭುತ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

ಜಡೇಜಾ ಜವಾಬ್ದಾರಿ ಆಟ:
ಮಧ್ಯಮ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ(83*) ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ರಿಷಬ್ ಪಂತ್ ಸ್ಪೋಟಕ ಆಟವಾಡಿದರೆ, ಮತ್ತೊಂದೆಡೆ ನಿಧಾನ ಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿದ ಜಡೇಜಾ, ಆಕರ್ಷಕ ಅರ್ಧಶತಕ ಸಿಡಿಸಿದರು. ಪಂತ್ ಔಟಾದ ನಂತರವೂ ಬ್ಯಾಟಿಂಗ್ ಮುಂದುವರಿಸಿದ ಜಡೇಜಾ, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆದರೆ ರಿಷಬ್ ಪಂತ್ ಔಟಾದ ಬಳಿಕ ಕಣಕ್ಕಿಳಿದ ಶಾರ್ದೂಲ್ ಥಾಕೂರ್(1) ರನ್‌ಗಳಿಸಿ ಔಟಾದರು.
ಇಂಗ್ಲೆಂಡ್ ಸಾಂಘಿಕ ಬೌಲಿಂಗ್:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡಕ್ಕೆ ಬೌಲರ್‌ಗಳು ಸಾಂಘಿಕ ಪ್ರದರ್ಶನದ ಮೂಲಕ ಕೈಹಿಡಿದರು. ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್(3/52) ಇನ್ನಿಂಗ್ಸ್ ಆರಂಭದಲ್ಲೇ ಎರಡು ವಿಕೆಟ್ ಪಡೆದು ಮೇಲುಗೈ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮ್ಯಾಥಿವ್ ಪೊಟ್ಸ್(2/85), ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.