Durand Cup Football 2022- ಹ್ಯಾಟ್ರಿಕ್ ಗೆಲುವಿನತ್ತ ಬಿಎಫ್ ಸಿ ಚಿತ್ತ ..!

ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಇಂದು (ಆಗಸ್ಟ್ 30ರಂದು) ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಮತ್ತು ಗೋವಾ ತಂಡಗಳು ಹೋರಾಟ ನಡೆಸಲಿವೆ.
ಕೊಲ್ಕತ್ತಾದ ವಿವೇಕಾನಂದ ಯುವ ಭಾರತಿ ಅಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ಕ್ವಾರ್ಟರ್ ಫೈನಲ್ ಪ್ರವೇಶಿಸುವತ್ತ ಚಿತ್ತವನ್ನಿಟ್ಟಿದೆ.
ಎ ಬಣದಲ್ಲಿರುವ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಆಡಿರುವ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಜೊತೆಗೆ ಆರು ಅಂಕಗಳನ್ನು ಪಡೆದುಕೊಂಡಿದೆ.
ಸೈಮನ್ ಗ್ರೇಸನ್ ಅವರ ಗರಡಿಯಲ್ಲಿ ಪಳಗಿರುವ ಬಿಎಫ್ ಸಿ ತಂಡ ಮೊದಲ ಪಂದ್ಯವನ್ನು ಜಮ್‍ಶೆಡ್‍ಪುರ ವಿರುದ್ಧ ಹಾಗೂ ಎರಡನೇ ಪಂದ್ಯವನ್ನು ಇಂಡಿಯನ್ ಏರ್ ಫೋರ್ಸ್ ವಿರುದ್ಧ ಭರ್ಜರಿ ಜಯವನ್ನು ದಾಖಲಿಸಿದೆ. ಈ ಗೆಲುವಿನ ಆತ್ಮವಿಶ್ವಾಸದೊಂದಿಗೆ ಮೂರನೇ ಗೆಲುವನ್ನು ಎದುರು ನೋಡುತ್ತಿದೆ. ಅಲ್ಲದೆ ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮಗೊಳಿಸುವತ್ತ ಚಿತ್ತವನ್ನಿಟ್ಟಿದೆ. ನಾಯಕ ಸುನೀಲ್ ಚೆಟ್ರಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂಬ ನಂಬಿಕೆಯೂ ಇದೆ. ಈ ಪಂದ್ಯ ಸಂಜೆ 6 ಗಂಟೆಗೆ ಶುರುವಾಗಲಿದೆ.
ಇನ್ನು ಗೋವಾ ತಂಡ ಈಗಾಗಲೇ ಮೂರು ಪಂದ್ಯಗಳನ್ನು ಆಡಿದೆ. ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯವನ್ನು ಸೋತಿದೆ. ಒಟ್ಟು ಆರು ಅಂಕಗಳೊಂದಿಗೆ ಗೋವಾ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಮ್ಮೆದನ್ ತಂಡ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.