Durand Cup 2022- ಸೆಮೀಸ್ ಗೆ ಮುಂಬೈ ಸಿಟಿ..! ಇಂದು ರಾಜಸ್ತಾನ ಯುನೈಟೆಡ್ – ಹೈದ್ರಬಾದ್ ಎಫ್ ಸಿ ಜಟಾಪಟಿ

ಮುಂಬೈ ಸಿಟಿ ಫುಟ್ ಬಾಲ್ ಕ್ಲಬ್ ತಂಡ ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಭಾನುವಾರ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ತಂಡ 5-3 ಗೋಲುಗಳಿಂದ ಚೆನ್ನೈಯಿನ್ ತಂಡವನ್ನು ಪರಾಭವಗೊಳಿಸಿತು.
ಮುಂಬೈ ಸಿಟಿ ತಂಡದ ಪರ ಗ್ರೇಗ್ ಸ್ಟೆವಾರ್ಟ್ ಅವರು ಹ್ಯಾಟ್ರಿಕ್ ಗೋಲು ದಾಖಲಿಸಿದ್ರು. ಪಂದ್ಯದ 40, 100 ಮತ್ತು 118ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೇ ಲಾಲಿಯನ್ ಝುಲಾ ಚಹಂಗ್ಟೆ ಅವರು ಪಂದ್ಯದ 78 ಮತ್ತು 94 ನೇ ನಿಮಿಷಗಲ್ಲಿ ಗೋಲು ದಾಖಲಿಸಿದ್ರು.
ಮುಂಬೈ ತಂಡಕ್ಕೆ ಚೆನ್ನೈಯಿನ್ ಆಟಗಾರರು ಕೂಡ ತೀವ್ರ ಪ್ರತಿರೋಧ ಒಡ್ಡಿದ್ದರು. ಚೆನ್ನೈಯಿನ್ ತಂಡದಿಂದ ಪೀಟರ್ ಸ್ಲಿಸ್ಕೋವಾ 59ನೇ ನಿಮಿಷ, ಜಾಕ್ಸನ್ ಧಾಸ್ 89ನೇ ನಿಮಿಷ ಹಾಗೂ ರಹೀಲ್ ಆಲಿ 112ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರು.
ಸೆಪ್ಟಂಬರ್ 13ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ತಂಡ ಮತ್ತು ಮಹಮ್ಮದನ್ ಸ್ಪೋಟ್ರ್ಸ್ ಕ್ಲಬ್ ತಂಡಗಳು ಕಾದಾಟ ನಡೆಸಲಿವೆ.
ರಾಜಸ್ತಾನ ಯುನೈಟೆಡ್ ಮತ್ತು ಹೈದ್ರಬಾದ್ ಎಫ್ ಸಿ ಫೈಟ್
ಸೆಪ್ಟಂಬರ್ 11ರಂದು ನಡೆಯಲಿರುವ ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ತಾನ ಯುನೈಟೆಡ್ ಮತ್ತು ಹೈದ್ರಬಾದ್ ಫುಟ್ ಬಾಲ್ ಕ್ಲಬ್ ತಂಡಗಳು ಮುಖಾಮುಖಿ ನಡೆಸಲಿವೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ತಂಡ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡವನ್ನು ಎದುರಿಸಲಿದೆ. ಇಂದು ಸಂಜೆ 6ಗಂಟೆಯಿಂದ ಕೊಲ್ಕತ್ತಾ ಸಾಲ್ಟ್ ಲೇಕ್ ಸಿಟಿ ಅಂಗಣದಲ್ಲಿ ನಡೆಯಲಿದೆ.