ಯಶ್ ದುಬೆ ಹಾಗೂ ಶುಭಂ ಶರ್ಮಾ ಅವರು ಸಿಡಿಸಿದ ಶತಕದ ನೆರವಿನಿಂದ ಮಧ್ಯಪ್ರದೇಶ ಪ್ರಸಕ್ತ ಸಾಲಿನ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಸನಿಹದಲ್ಲಿ ನಿಂತಿದೆ.
ಶುಕ್ರವಾರ 1 ವಿಕೆಟ್ ಗೆ 123 ರನ್ ಗಳಿಂದ ಮೂರನೇ ದಿನದಾಟವನ್ನು ಮುಂದುವರೆಸಿದ ಮಧ್ಯಪ್ರದೇಶ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 368 ರನ್ ಕಲೆ ಹಾಕಿತು. ನಾಲ್ಕನೇ ದಿನಕ್ಕೆ ರಜತ್ ಪಟೇದಾರ್ ಅಜೇಯ 67 ಹಾಗೂ ಆದಿತ್ಯ ಶ್ರೀವಾತ್ಸವ್ ಅಜೇಯ 11 ರನ್ ಬಾರಿಸಿ ಕ್ರೀಸ್ ನಲ್ಲಿದ್ದಾರೆ. ಮಧ್ಯಪ್ರದೇಶ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 6 ರನ್ ಗಳ ಅವಶ್ಯಕತೆ ಇದೆ. ಅಂದಾಗ ಮಧ್ಯಪ್ರದೇಶ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದಂತೆ ಆಗುತ್ತದೆ.

ಎರಡನೇ ವಿಕೆಟ್ ಗೆ ಯಶ್ ದುಬೆ ಹಾಗೂ ಶುಭಂ ಶರ್ಮಾ ಭರ್ಜರಿ ಆಟದ ಪ್ರದರ್ಶನ ನೀಡಿದರು. ಬಲಿಷ್ಠ ಮುಂಬೈ ತಂಡದ ಬೌಲಿಂಗ್ ವಿಭಾಗದ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಜೋಡಿ ಆರ್ಭಟಿಸಿತು.

ಫೈನಲ್ ಪಂದ್ಯದ ಮಹತ್ವ ಅರಿತು ಆಡಿದ ಯಶ್ ಹಾಗೂ ಶುಭಂ ಎರಡನೇ ವಿಕೆಟ್ ಗೆ 222 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಶುಭಂ ಶರ್ಮಾ 215 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ 116 ರನ್ ಬಾರಿಸಿ ಎರಡನೇ ವಿಕೆಟ್ ರೂಪದಲ್ಲಿ ಔಟ್ ಆದರು.

ಮೂರನೇ ವಿಕೆಟ್ ಗೆ ಆರಂಭಿಕ ಯಶ್ ದುಬೆ ಹಾಗೂ ಭರವಸೆಯ ಆಟಗಾರ ರಜತ್ ಪಟೇದಾರ್ ಜೊತೆಗೂಡಿ 72 ರನ್ ಗಳನ್ನು ಕಲೆ ಹಾಕಿತು. ಯಶ್ ದುಬೆ 336 ಎಸೆತಗಳಲ್ಲಿ 133 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರ ಅಮೋಘ ಇನ್ನೊ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಸೇರಿವೆ.

ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ರಜತ್ ಪಟೇದಾರ್ 13 ಬೌಂಡರಿ ಸೇರಿದಂತೆ ಅಜೇಯ 67 ರನ್ ಬಾರಿಸಿ ಕ್ರೀಸ್ ನಲ್ಲಿದ್ದಾರೆ. ಮಧ್ಯಪ್ರದೇಶ ತಂಡ ದೊಡ್ಡ ಮೊತ್ತ ಕಲೆ ಹಾಕುವ ಕನಸು ಕಾಣುತ್ತಿದೆ.
ಮಧ್ಯಪ್ರದೇಶದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಮುಂಬೈ ಬೌಲರ್ ಗಳು ಎಡವಿದರು.