ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಸರ್ಫರಾಜ್ ಖಾನ್ (134 ರನ್) ಸಿಡಿಸಿದ ಶತಕದ ನೆರವಿನಿಂದ ಮುಂಬೈ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದ್ದು, ಮಧ್ಯಪ್ರದೇಶ ತಿರುಗೇಟು ನೀಡುವ ಸೂಚನೆ ನೀಡಿದೆ.
ಗುರುವಾರ ಎರಡನೇ ದಿನದಾಟವನ್ನು 5 ವಿಕೆಟ್ ಗೆ 248 ರನ್ ಗಳಿಂದ ಮುಂದುವರೆಸಿದ ಮುಂಬೈ ಮೊದಲ ಇನ್ನಿಂಗ್ಸ್ ನಲ್ಲಿ 374 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ದಿನದಾಟದಂತ್ಯಕ್ಕೆ 1 ವಿಕೆಟ್ ಗೆ 123 ರನ್ ಕಲೆ ಹಾಕಿದ್ದು, 251 ರನ್ ಗಳ ಹಿನ್ನಡೆ ಅನುಭವಿಸುತ್ತಿದೆ. ಯಶ್ ದುಬೆ (ಅಜೇಯ 44) ಹಾಗೂ ಶುಭಂ ಶರ್ಮಾ (ಅಜೇಯ 41) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಿನದಾಟವನ್ನು ಆರಂಭಿಸಿದ ಮುಂಬೈ ತಂಡದ ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ತಮ್ಮ ಉತ್ತಮ ಲಯವನ್ನು ಮುಂದುವರೆಸಿದರು. ಮಹತ್ವದ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದ ಸರ್ಫರಾಜ್ 243 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ 134 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇವರ ಭರ್ಜರಿ ಬ್ಯಾಟಿಂಗ್ ಬಲದಿಂದ ಮುಂಬೈ ಉತ್ತಮ ಮೊತ್ತ ಕಲೆ ಹಾಕಿತು.
ಉಳಿದಂತೆ ಮುಂಬೈ ಪರ ಹಾರ್ದಿಕ್ ತಮೋರ್ (24), ಶಮ್ಸ್ ಮುಲಾನಿ (12), ತನುಷ್ ಕೋಟ್ಯಾನ್ (15) ತಂಡದ ಮೊತ್ತ ಹಿಗ್ಗಿಸಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ ತಂಡದ ಪರ ಯಶ್ ದುಬೆ ಹಾಗೂ ಹಿಮಾಂಶು ಮಂತ್ರಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ಮೊದಲ ವಿಕೆಟ್ ಗೆ 16.3 ಓವರ್ ಗಳಲ್ಲಿ 47 ರನ್ ಸೇರಿಸಿತು. ಭರವಸೆಯ ಆಟಗಾರ ಹಿಮಾಂಶು 31 ರನ್ ಗಳಿಗೆ ಆಟ ಮುಗಿಸಿದರು.
ಎರಡನೇ ವಿಕೆಟ್ ಗೆ ಯಶ್ ದುಬೆ ಸೇರಿಕೊಂಡು ಭರವಸೆಯ ಆಟಗಾರ ಶುಭಂ ಶರ್ಮಾ ತಂಡಕ್ಕೆ ಚೇತೋಹಾರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮುಂಬೈಗೆ ಪ್ರತ್ಯುತ್ತರ ನೀಡುವಂತೆ ಬ್ಯಾಟ್ ಮಾಡುತ್ತಿದ್ದು 76 ರನ್ ಗಳ ಸೇರಿಸಿತು.