ಅತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ಪಾಕಿಸ್ತಾನ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಜುಲೈ 16ರಂದು ಆರಂಭಗೊಳ್ಳಲಿದೆ.
2022-23ನೇ ಸಾಲಿನ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಭಾಗವಾಗಿ ಟೆಸ್ಟ್ ಸರಣಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಜುಲೈ 6ರಂದು ಶ್ರೀಲಂಕಾಕ್ಕೆ ತೆರಳಲಿದ್ದು, ಸರಣಿ ಆರಂಭಕ್ಕೂ ಮುನ್ನ ಪಾಕ್ ಪಡೆ ಕೊಲಂಬೊದಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್‌ನಲ್ಲಿ ಉಭಯ ತಂಡಗಳು ಮಿಶ್ರ ಪ್ರದರ್ಶನ ಕಂಡಿವೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 1-1ರ ಸಮಬಲದ ಪ್ರದರ್ಶನ ನೀಡಿದ್ದ ಪಾಕಿಸ್ತಾನ್, ನಂತರದಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ 0-1ರ ಅಂತರದಿಂದ ಸರಣಿ ಸೋಲು ಕಂಡಿದೆ. ಇದೀಗ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್‌ನಲ್ಲಿ ಮುಂದಿನ ಹಂತಕ್ಕೆ ಏರುವ ನಿರೀಕ್ಷೆಯೊಂದಿಗೆ ಲಂಕಾ ಪ್ರವಾಸಕ್ಕೆ ತಯಾರಾಗಿದೆ.
ಶ್ರೀಲಂಕಾ ಸಹ ಏಳು-ಬೀಳಿನ ಪ್ರದರ್ಶನ ಕಂಡಿದ್ದು, ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಲಂಕಾ, ನಂತರದಲ್ಲಿ ಭಾರತದ ವಿರುದ್ಧ ಸೋಲಿನ ಆಘಾತ ಕಂಡಿತ್ತು. ಆದರೆ ಬಾಂಗ್ಲಾದೇಶ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿರುವ ಶ್ರೀಲಂಕಾ ಇದೀಗ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್‌ನ ಟೇಬಲ್ ಟಾಪರ್ ಆಗಿರುವ ಆಸ್ಟ್ರೇಲಿಯಾದ ಸವಾಲು ಎದುರಿಸೋಕ್ಕೆ ಸಜ್ಜಾಗಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್‌ನಲ್ಲಿ ಮಿಶ್ರ ಪ್ರದರ್ಶನ ಕಂಡಿರುವ ಎರಡು ತಂಡಗಳು ಪಾಯಿಂಟ್ಸ್ ಟೇಬಲ್‌ನಲ್ಲಿ ಸಮಬಲದ ಸ್ಥಾನದಲ್ಲಿವೆ. 55.56 ಪಾಯಿಂಟ್ ಸರಾಸರಿ ಹೊಂದಿರುವ ಶ್ರೀಲಂಕಾ 4ನೇ ಸ್ಥಾನದಲ್ಲಿದ್ದರೆ. 52.38ರ ಪಾಯಿಂಟ್ ಸರಾಸರಿಯೊಂದಿಗೆ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ. ಆದರೆ ಪಾಕಿಸ್ತಾನ್ ವಿರುದ್ಧದ ಸರಣಿಗೂ ಮುನ್ನ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ನಡೆಯಲಿದ್ದು, ಪಾಯಿಂಟ್ಸ್ ಟೇಬಲ್ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
7 ವರ್ಷಗಳ ಬಳಿಕ ಪ್ರವಾಸ
ಪಾಕಿಸ್ತಾನ್ ತಂಡ ಏಳು ವರ್ಷಗಳ ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದೆ. ಈ ಹಿಂದೆ 2015ರಲ್ಲಿ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ತೆರಳಿದ್ದ ಪಾಕಿಸ್ತಾನ 2-1ರ ಅಂತರದಿಂದ ಸರಣಿ ಗೆದ್ದಿತ್ತು. ಸರಣಿಯಲ್ಲಿ 1-1ರ ಸಮಬಲ ಕಂಡಿದ್ದ ಸಂದರ್ಭದಲ್ಲಿ ಸರಣಿಯ 3ನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್‌ನಲ್ಲೇ ದಾಖಲೆಯ 377 ರನ್‌ಗಳನ್ನ ಚೇಸ್ ಮಾಡಿ ಅವಿಸ್ಮರಣೀಯ ಗೆಲುವು ಸಾಧಿಸಿತ್ತು.
ಶ್ರೀಲಂಕಾ v ಪಾಕಿಸ್ತಾನ ವೇಳಾಪಟ್ಟಿ:
ಜುಲೈ 11-13: ಪಾಕಿಸ್ತಾನಕ್ಕೆ ಮೂರು ದಿನಗಳ ಅಭ್ಯಾಸ ಪಂದ್ಯ
ಜುಲೈ 16-20: 1ನೇ ಟೆಸ್ಟ್, ಸ್ಥಳ: ಗಾಲೆ
ಜುಲೈ 24-28: 2ನೇ ಟೆಸ್ಟ್, ಸ್ಥಳ: ಕೊಲಂಬೊ