ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸಿ, ಏಕದಿನ ಕ್ರಿಕೆಟ್ನಲ್ಲಿ ಕಮಾಲ್ ಮಾಡಿರುವ ಶ್ರೇಯಸ್ ಅಯ್ಯರ್, ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ಮಿಂಚುವ ಮೂಲಕ ಎಲ್ಲಾ ತಾನೊಬ್ಬ ಪರ್ಫೆಕ್ಟ್ ಕ್ರಿಕೆಟರ್ ಅನ್ನೋದನ್ನ ಸಾಬೀತು ಮಾಡಿದ್ದಾರೆ.
ಟೀಂ ಇಂಡಿಯಾದ ಟೆಸ್ಟ್ ತಂಡದ ಪ್ರಮುಖ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪುಜಾರ ಅವರ ಬದಲಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಶ್ರೇಯಸ್ ಅಯ್ಯರ್, ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಂಡಿದ್ದಾರೆ. ತಾಳ್ಮೆ ಹಾಗೂ ಜವಾಬ್ದಾರಿಯ ಬ್ಯಾಟಿಂಗ್ ಮೂಲಕ ಅಗತ್ಯ ಸಮಯದಲ್ಲಿ ತಂಡಕ್ಕೆ ಆಸರೆಯಾಗಿರುವ ಯುವ ಆಟಗಾರ, ಭವಿಷ್ಯದಲ್ಲಿ ಟೀಂ ಇಂಡಿಯಾದ ಟೆಸ್ಟ್ ತಂಡದ ಕಾಯಂ ಸದಸ್ಯನಾಗುವ ಸೂಚನೆ ನೀಡಿದ್ದಾರೆ.
ಟೆಸ್ಟ್ ಸರಣಿಗೂ ಮುನ್ನ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್, ಟೆಸ್ಟ್ ಸರಣಿಯಲ್ಲೂ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಅಯ್ಯರ್, ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಉಭಯ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಬೌಲರ್ಗಳಿಗೆ ನೆರವಾಗಿದ್ದ ಪಿಚ್ನಲ್ಲಿ, ಪ್ರಮುಖ ಆಟಗಾರರ ವೈಫಲ್ಯದ ನಡುವೆ ಶ್ರೇಯಸ್ ಅಯ್ಯರ್ ತೋರಿದ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದರು.
ಈ ಹಿಂದೆ ನ್ಯೂಜಿ಼ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮಿಂಚಿದ್ದ ಶ್ರೇಯಸ್ ಅಯ್ಯರ್, ಶ್ರೀಲಂಕಾ ವಿರುದ್ಧವೂ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೂ 4 ಪಂದ್ಯಗಳನ್ನ ಆಡಿರುವ ಅವರು, 7 ಇನ್ನಿಂಗ್ಸ್ನಲ್ಲಿ 55.42ರ ಸರಾಸರಿಯಲ್ಲಿ 388 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಒಳಗೊಂಡಿದೆ.
ಅಲ್ಲದೇ 2022ರಲ್ಲಿ ಅದ್ಭುತ ಫಾರ್ಮ್ ಕಂಡುಕೊಂಡಿರುವ ಶ್ರೇಯಸ್ ಅಯ್ಯರ್, ಶ್ರೀಲಂಕಾ ವಿರುದ್ಧದ ಮೂರು ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ಅರ್ಧಶತಕ ಗಳಿಸಿ ಮಿಂಚಿದ್ದರು. 1ನೇ ಟಿ20ಯಲ್ಲಿ 57*, 2ನೇ ಪಂದ್ಯದಲ್ಲಿ 74* ಹಾಗೂ 3ನೇ ಪಂದ್ಯದಲ್ಲಿ 73* ರನ್ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 27, 2ನೇ ಟೆಸ್ಟ್ನಲ್ಲಿ 92 ಹಾಗೂ 67 ರನ್ಗಳಿಸಿದ್ದಾರೆ.