Dinesh karthik – ಡಿಕೆ, ಒಂದು ಅದ್ಭುತ ಯಶೋಗಾಥೆ!

ಕೈ ಹಿಡಿದ ಪತ್ನಿಯಿಂದ ಮೋಸ, ಜೀವಕ್ಕೆ ಜೀವವಾಗಿದ್ದ ಗೆಳೆಯನಿಂದ ದೋಖಾ, ಪ್ರಬುದ್ಧತೆ ಇರದ ವಯಸ್ಸಿನಲ್ಲೇ ಯಶಸ್ಸು ತಂದು ಕೊಟ್ಟ ಕ್ರಿಕೆಟ್, ಆ ಯಶಸ್ಸನ್ನು ಅಷ್ಟೇ ಬೇಗ ಕಿತ್ತುಕೊಂಡ ಅದೇ ಕ್ರಿಕೆಟ್. ಹೆಜ್ಜೆ ಹೆಜ್ಜೆಗೂ ಅವಮಾನ, ನೋವು, ಸಂಕಟ.
ಇಷ್ಟೆಲ್ಲಾ ಅನುಭವಿಸಿದ ಮೇಲೆ ಒಬ್ಬ ವ್ಯಕ್ತಿ ಧೂಳಿನಿಂದೆದ್ದು ನಿಲ್ತಾನೆ ಅಂದ್ರೆ ಅದು ದಿನೇಶ್ ಕಾರ್ತಿಕ್’ನಂತಹ ಗಟ್ಟಿ ಗುಂಡಿಗೆ ಇದ್ದವರಿಗೆ ಮಾತ್ರ ಸಾಧ್ಯ.
ಡಿಕೆ.. ದಿನೇಶ್ ಕಾರ್ತಿಕ್’ನ ಜೀವನ ಯಾವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ಈತನ ಬಗ್ಗೆ ಯಾರಾದ್ರೂ ಬಯೋಪಿಕ್ ಮಾಡಿದ್ರೆ ಸಿನಿಮಾ ಸೂಪರ್’ಹಿಟ್ ಗ್ಯಾರಂಟಿ. ಕಾರಣ, ಡಿಕೆ ಜೀವನದಲ್ಲಿ ನಡೆದ ಕೆಲ ಘಟನೆಗಳು.
ತಂದೆ-ತಾಯಿ ತೋರಿಸಿದ ಹುಡುಗಿ ಎಂದು ಮರು ಮಾತಾಡದೆ ಮದುವೆಯಾದ್ರೆ, ಆಕೆ ಗಂಡನ ಸ್ನೇಹಿತ ಮುರಳಿ ವಿಜಯ್’ನನ್ನು ಪ್ರೀತಿಸಿ ಬಿಡ್ತಾಳೆ. ಅದೆಂಥಾ ‘ಪ್ರೀತಿ’ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಬಿಡಿ! ಗುಟ್ಟಾಗಿದ್ದ ಡಿಕೆ ಪತ್ನಿ-ಮುರಳಿ ವಿಜಯ್ ಸಂಬಂಧ ರಟ್ಟಾಗಿದ್ದು ಆಕೆ ಗರ್ಭಿಣಿಯಾದಾಗ. ಪತ್ನಿ ಮತ್ತು ಸ್ನೇಹಿತನಿಂದಲೇ ನಂಬಿಕೆದ್ರೋಹ. ಪತ್ನಿಗೆ ಡೈವೋರ್ಸ್ ಕೊಡದೆ ಬೇರೆ ದಾರಿ ಇರ್ಲಿಲ್ಲ.

ಕ್ರಿಕೆಟ್ ಆಡುತ್ತಾ ನೋವು ಮರೆಯೋಣ ಅಂದ್ರೆ ಅಲ್ಲೂ ದೋಖಾ ಮಾಡಿದ ಸ್ನೇಹಿತನ ಮುಖವನ್ನೇ ನೋಡಬೇಕಾದ ಪರಿಸ್ಥಿತಿ. ದಿನೇಶ್ ಕಾರ್ತಿಕ್ ಅನುಭವಿಸಿದ್ದ ಆ ವೇದನೆಯನ್ನು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರಣಜಿ ಪಂದ್ಯಗಳಲ್ಲಿ ನಾನೇ ಕಣ್ಣಾರೆ ಕಂಡಿದ್ದೇನೆ.
ಬ್ಯಾಟಿಂಗ್ ಮಾಡ್ತಾ ಇದ್ರೆ Non strikeನಲ್ಲಿ ಅದೇ ಮುರಳಿ ವಿಜಯ್. ಮಾತಿಲ್ಲ, ಕಥೆಯಿಲ್ಲ. ಇಬ್ಬರೂ ಜೊತೆಯಾಗಿ ಬ್ಯಾಟಿಂಗ್ ಮಾಡುವಾಗ Yes, No ಅಷ್ಟೇ. ತಮಿಳುನಾಡು ತಂಡ ಫೀಲ್ಡಿಂಗ್ ಮಾಡ್ತಿದ್ದಾಗ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್, ಸ್ಲಿಪ್’ನಲ್ಲಿ ನೋಡಿದ್ರೆ ಮತ್ತದೇ ದೋಖಾ ಗಿರಾಕಿ ಮುರಳಿ ವಿಜಯ್. ನೋವು, ಸಿಟ್ಟು, ಅವಮಾನ, ರೋಷ, ಆಕ್ರೋಶ.. ಎಲ್ಲವನ್ನೂ ಹಲ್ಲು ಕಚ್ಚಿ ನುಂಗಿಕೊಂಡಿದ್ದ ಕಾರ್ತಿಕ್. Dinesh karthik -Secret behind DK’s longevity revealed
2006ರಲ್ಲಿ ಭಾರತ ತಂಡ ತನ್ನ ಮೊದಲ T20I ಕ್ರಿಕೆಟ್ ಪಂದ್ಯವಾಡಿದಾಗ, ಆ ಪಂದ್ಯದಲ್ಲಿ 31* ರನ್ ಬಾರಿಸಿ ‘ಮ್ಯಾನ್ ಆಫ್ ದಿ ಮ್ಯಾಚ್’ ಆದವನು ಈ ಡಿಕೆ. 2006ರಿಂದ 2022. ಈ 16 ವರ್ಷಗಳಲ್ಲಿ 50ಕ್ಕೂ ಹೆಚ್ಚು ಮಂದಿ ಭಾರತ ತಂಡಕ್ಕೆ ಬಂದಿದ್ದಾರೆ, ಕೆಲವರು ಇನ್ನೂ ಆಡುತ್ತಿದ್ದಾರೆ, ಹಲವರು ಬಂದಷ್ಟೇ ವೇಗದಲ್ಲಿ ಮಿಂಚಿ ಮರೆಯಾಗಿ ಹೋಗಿದ್ದಾರೆ. ಆದರೆ ಒಬ್ಬನೇ ಒಬ್ಬ ದಿನೇಶ್ ಕಾರ್ತಿಕ್ ಇನ್ನೂ ಆಡುತ್ತಿದ್ದಾನೆ.
ಮೊನ್ನೆ ಜೂನ್ 1ಕ್ಕೆ ಡಿಕೆಗೆ ಭರ್ತಿ 37 ವರ್ಷ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಅದು ನಿವೃತ್ತಿಯ ವಯಸ್ಸು. ಅದೇ ವಯಸ್ಸಲ್ಲಿ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಟಿ20ಯಲ್ಲಿ ತನ್ನ ಮೊದಲ ಅರ್ಧಶತಕ ಬಾರಿಸ್ತಾನೆ. ಅದೂ ಮೊದಲ T20I ಪಂದ್ಯವಾಡಿದ 16 ವರ್ಷಗಳ ನಂತರ. ಇನ್ನೆರಡು ವರ್ಷ ಕಳೆದ್ರೆ ಡಿಕೆ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟು 20 ವರ್ಷ.

2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದವನ ಕೈಯಲ್ಲಿ ಒಮ್ಮಿಂದೊಮ್ಮೆಗೇ ಕ್ರಿಕೆಟ್ ಬ್ಯಾಟ್ ಬದಲು ಮೈಕ್ ಕಾಣಿಸಿಕೊಳ್ಳುತ್ತದೆ. ಅರ್ಥಾತ್ ಡಿಕೆ ಕಾಮೆಂಟೇಟರ್ ಆಗಿ ಬಿಡ್ತಾನೆ. ಅಲ್ಲಿಗೆ ಕ್ರಿಕೆಟ್ ಕರಿಯರ್’ಗೆ ಫುಲ್’ಸ್ಟಾಪ್ ಅಂತ ಅರ್ಥ. ಆದರೆ ಡಿಕೆ ವಿಚಾರದಲ್ಲಿ ಆಗಿದ್ದೇ ಬೇರೆ. ಐಪಿಎಲ್’ನಲ್ಲಿ RCB ಪರ ಮ್ಯಾಚ್ ಫಿನಿಷರ್ ಪಾತ್ರದಲ್ಲಿ ಅಬ್ಬರಿಸಿ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿ, ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ ಭಾರತವನ್ನು ಗೆಲ್ಲಿಸಿದ್ದಾನೆ.
ಇಡೀ ಜಗತ್ತೇ ತನ್ನ ವಿರುದ್ಧ ನಿಂತಾಗ ಹಠವ ಬಿಡದೆ ಮುನ್ನುಗ್ಗಿ ಬಂದು ನಿಂತ ಗಟ್ಟಿಗ. ಈ ಗಟ್ಟಿಗನನ್ನು ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್’ನಲ್ಲಿ ಆಡಿಸದೇ ಇದ್ರೆ ಅದು ಭಾರತ ತಂಡಕ್ಕೆ ಆಗಲಿರುವ ಬಹುದೊಡ್ಡ ನಷ್ಟ.