ಐಪಿಎಲ್ ರಿಟೈನ್ ನಿಯಮದ ಪ್ರಕಾರ ಫ್ರಾಂಚೈಸಿಗಳು ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಿಯಮದ ಪ್ರಕಾರ ಲಭ್ಯವಿದ್ದ 4 ಆಟಗಾರರನ್ನು ಉಳಿಸಿಕೊಂಡಿದೆ. 4 ಆಟಗಾರರನ್ನು ಉಳಿಸಿಕೊಂಡರೆ ಫ್ರಾಂಚೈಸಿ ತನ್ನ ಮೊದಲ ಆಟಗಾರನಿಗೆ 16 ಕೋಟಿ, 2ನೇ ಆಟಗಾರನಿಗೆ 12ಕೋಟಿ, 3ನೇ ಆಟಗಾರನಿಗೆ 8 ಕೋಟಿ ಹಾಗೂ 4 ನೇ ಆಟಗಾರನಿಗೆ 6 ಕೋಟಿ ರೂಪಾಯಿ ನೀಡಬೇಕು. 90 ಕೋಟಿ ರೂಪಾಯಿಗಳ ಫ್ರಾಂಚೈಸಿ ಪರ್ಸ್ನಿಂದ 42 ಕೋಟಿ ರೂಪಾಯಿಗಳು ಕಳೆದು ಹೋಗಲಿವೆ. ಕೇವಲ 48 ಕೋಟಿ ರೂಪಾಯಿಗಳು ಮಾತ್ರ ಉಳಿಯಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಳ್ಳುವುದು ಸ್ಪಷ್ಟವಾಗಿತ್ತು. ಮೊದಲ ಆಟಗಾರನಿಗೆ ಕೊಡುವ 16 ಕೋಟಿ ಸಂಭಾವನೆಯನ್ನು ನೀಡುವುದು ಬಹುತೇಕ ನಿಶ್ಚಯವಾಗಿತ್ತು. ಆದರೆ ಕೊನೆಯಲ್ಲಿ ಧೋನಿ ಫ್ರಾಂಚೈಸಿ ಮಾಲೀಕರ ಜೊತೆ ಚರ್ಚೆ ಮಾಡಿ ಮುಂದಿನ ಮೂರು ವರ್ಷಕ್ಕೆ ಬೇಕಾಗುವ ತಂಡವನ್ನು ರೂಪಿಸಬೇಕಿದೆ. ಹೀಗಾಗಿ ಮೊದಲ ಆಟಗಾರನನ್ನಾಗಿ ರವೀಂದ್ರ ಜಡೇಜಾ ಆಯ್ಕೆಗೆ ಸೂಚಿಸಿದರು ಎನ್ನಲಾಗಿದೆ. ಧೋನಿ 12 ಕೋಟಿ ಸಂಭಾವನೆಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಐಪಿಎಲ್ನಲ್ಲಿ ಧೋನಿಗಿಂತ ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ರಿಷಬ್ ಪಂತ್, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಮತ್ತು ಸಂಜು ಸ್ಯಾಮ್ಸನ್ ಈ ಬಾರಿ ಅಧಿಕ ಸಂಭಾವನೆ ಪಡೆಯಲಿದ್ದಾರೆ. ಧೋನಿಯ ಈ ನಡೆಯನ್ನು ಕಂಡು ಉಳಿದ ಫ್ರಾಂಚೈಸಿಗಳಿಗೆ ಅಚ್ಚರಿಯಾಗಿದೆ. ಐಪಿಎಲ್ನಲ್ಲಿ ಧೋನಿ ಇಲ್ಲಿ ತನಕ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರನಾಗಿ ಮಿಂಚಿದ್ದರು. ಆದರೆ ಈ ಬಾರಿ ತಂಡದ ಹಿತಕ್ಕಾಗಿ ಧೋನಿ ಸಂಭಾವನೆಯನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಧೋನಿ ನಡೆಗೆ ಕ್ರಿಕೆಟ್ ಲೋಕದಿಂದ ಮೆಚ್ಚುಗೆ ವ್ಯಕ್ತವಾಗಿದೆ.