ಗಾಯದ ಸಮಸ್ಯೆಯಿಂದಾಗಿ ಹಲವು ತಿಂಗಳುಗಳ ಕಾಳ ಕ್ರಿಕೆಟ್ನಿಂದ ಹೊರಗುಳಿದಿದ್ದ ನ್ಯೂಜಿ಼ಲೆಂಡ್ ತಂಡದ ನಾಯಕ ಕೇನ್ ವಿಲಿಯಂಸನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅದ್ಭುತ ಕಮ್ಬ್ಯಾಕ್ ಮಾಡಿದ್ದಾರೆ.
ಈ ಹಿಂದೆ ಭಾರತದಲ್ಲೇ ನಡೆದ 2023ರ ಐಪಿಎಲ್ ಟೂರ್ನಿಯಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದ ವಿಲಿಯಂಸನ್, ಐಪಿಎಲ್ನಿಂದ ಹೊರಗುಳಿದಿದ್ದರು. ಇದಾದ ನಂತರ ಕ್ರಿಕೆಟ್ನಿಂದ ಹೊರಗುಳಿದಿದ್ದ ವಿಲಿಯಂಸನ್, ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಹೀಗಾಗಿ ಭಾರತದಲ್ಲೇ ಗಾಯಗೊಂಡಿದ್ದ ಕಿವೀಸ್ ನಾಯಕ, ಇದೀಗ ಭಾರತದಲ್ಲೇ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ತಮ್ಮ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ.
ಅಲ್ಲದೇ ಗಾಯದ ಸಮಸ್ಯೆ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅದ್ಭುತ ಕಮ್ಬ್ಯಾಕ್ ಮಾಡಿರುವ ವಿಲಿಯಂಸನ್, ಏಕದಿನ ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ನಿಂದ ಮಿಂಚಿದ್ದಾರೆ. ಹೈದ್ರಾಬಾದ್ನ ರಾಜೀವ್ಗಾಂಧಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ದ ನಡೆದ ಅಭ್ಯಾಸ ಪಂದ್ಯದಲ್ಲಿ 8 ಬೌಂಡರಿ ಒಳಗೊಂಡಂತೆ 54*(50) ಅರ್ಧಶತಕ ಸಿಡಿಸಿ ಗಮನ ಸೆಳೆದರು. ಈ ಇನ್ನಿಂಗ್ಸ್ನ ಮೂಲಕ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ ವಿಲಿಯಂಸನ್, ವಿಶ್ವಕಪ್ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.
ವಿಲಿಯಂಸನ್ ಅವರ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಕಿವೀಸ್ ತಂಡ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅವರ ಶತಕದ ನೆರವಿನಿಂದ 345 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿ಼ಲೆಂಡ್ 6.2 ಓವರ್ಗಳು ಬಾಕಿ ಇರುವಂತೆಯೇ 346 ರನ್ಗಳಿಸಿ 5 ವಿಕೆಟ್ಗಳ ಗೆಲುವು ಸಾಧಿಸಿತು.
CWC 2023, New Zealand, Kane Williamson, ODI World Cup