ಐಸಿಸಿ ಏಕದಿನ ವಿಶ್ವಕಪ್-2023 ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಹಣಾಹಣಿ ನಡೆಸಲಿದ್ದು, ಗುವಾಹತಿಯಲ್ಲಿ ನಡೆಯುವ ಪಂದ್ಯಕ್ಕೆ ಎರಡು ತಂಡಗಳು ಸಜ್ಜಾಗಿದ್ದು, ಆಟಗಾರರಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ.
ಉಭಯ ತಂಡಗಳ ನಡುವಿನ ಅಭ್ಯಾಸ ಪಂದ್ಯ ಅಧಿಕೃತ ಪಂದ್ಯವಾಗದ ಹಿನ್ನೆಲೆಯಲ್ಲಿ ಎರಡು ತಂಡಗಳು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹಲವು ಆಟಗಾರರನ್ನ ಕಣಕ್ಕಿಳಿಸಬಹುದಾಗಿದೆ. ಹೀಗಾಗಿ ಈ ಅಭ್ಯಾಸ ಪಂದ್ಯದ ಮೂಲಕ ಎರಡು ತಂಡಗಳು ತಮಗೆ ಅಗತ್ಯವಿರುವ ರಣತಂತ್ರ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಆಟಗಾರರನ್ನ ಬಳಸಿಕೊಳ್ಳಲಿದೆ.
ವಿಶ್ವಕಪ್ ಟೂರ್ನಿಗೆ ಎರಡು ತಂಡಗಳ ಬಲಿಷ್ಠ ಆಟಗಾರರ ಪಡೆಯನ್ನೇ ಕಟ್ಟಿಕೊಂಡಿವೆ. ಇಂಗ್ಲೆಂಡ್ ತಂಡದಲ್ಲಿ ಜಾನಿ ಬೈರ್ಸ್ಟೋವ್, ಡಾವಿಡ್ ಮಲಾನ್, ಜೋ ರೂಟ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ ಹಾಗೂ ಮೊಯಿನ್ ಅಲಿ ಅವರುಗಳಂತ ಬಲಿಷ್ಠ ಬ್ಯಾಟಿಂಗ್ ಪಡೆಯನ್ನ ಹೊಂದಿದ್ದು, ಈ ಆಟಗಾರರು ಯಾವುದೇ ಕ್ರಮಾಂಕದಲ್ಲಾದರು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರ ಎದುರು ತಮ್ಮ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಲು ಟೀಂ ಇಂಡಿಯಾದ ಬೌಲರ್‌ಗಳಿಗೆ ಉತ್ತಮ ಅವಕಾಶ ಲಭಿಸಿದೆ.
ಪ್ರಮುಖವಾಗಿ ಭಾರತದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರುಗಳು ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಆಂಗ್ಲರ ವಿರುದ್ಧದ ಇಂದಿನ ಅಭ್ಯಾಸ ಪಂದ್ಯ ಭಾರತದ ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರುಗಳಿಗೆ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಉತ್ತಮ ಅವಕಾಶವಾಗಿದ್ದು, ಇಂದಿನ ಪಂದ್ಯದಲ್ಲಿ ಇವರುಗಳು ಕನಿಷ್ಠ ಇಂದಿಷ್ಟು ಓವರ್‌ಗಳು ಬೌಲಿಂಗ್ ಮಾಡುವುದರಲ್ಲಿ ಸಂದೇಹವಿಲ್ಲ.
ಕಿಶನ್ v ಶ್ರೇಯಸ್ ಚರ್ಚೆ:
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ನಡುವೆ ಪೈಪೋಟಿ ಶುರುವಾಗಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ಮಧ್ಯಮ ಕ್ರಮಾಂಕದಲ್ಲಿ ಎದುರಾಳಿ ತಂಡದ ಸ್ಪಿನ್ನರ್‌ಗಳ ಎದುರು ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರನಿಗೆ ಪ್ಲೇಯಿಂಗ್ ಇಲವೆನ್‌ನಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ. ಆದರೆ ಸದ್ಯ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಶ್ರೇಯಸ್ ಅಯ್ಯರ್, ಮಧ್ಯಮ ಕ್ರಮಾಂಕಕ್ಕೆ ತಾನು ಫಿಟ್ ಎಂಬುದನ್ನ ಸಾಬೀತುಪಡಿಸಿದ್ದಾರೆ. ಹೀಗಾಗಿ ಇಶಾನ್ ಕಿಶನ್‌ಗೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವೆಂಬ ಮಾತುಗಳಿದ್ದರೂ, ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಮ್ಯಾನೇಜ್ಮೆಂಟ್‌ನ ಗಮನ ಸೆಳೆಯುವ ಅವಕಾಶವಿದೆ.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಇಂಗ್ಲೆಂಡ್ ತಂಡ:
ಜಾಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.
CWC 2023, Team India, England, Warm-up, ODI Cricket