ತವರಿನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭರ್ಜರಿ ತಯಾರಿ ಮಾಡಿಕೊಂಡಿರುವ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಡೆಂಫೀ ಜ್ವರ ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.
ಚೆನ್ನೈನಲ್ಲಿ ಅಕ್ಟೋಬರ್ 8ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಭಾರತ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಚೆನ್ನೈ ತಲುಪಿರುವ ಟೀಂ ಇಂಡಿಯಾ ಆಟಗಾರರು, ಅಭ್ಯಾಸ ಸಹ ಆರಂಭಿಸಿದ್ದಾರೆ. ಈ ನಡುವೆ ಶುಭ್ಮನ್ ಗಿಲ್ ಅವರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿರುವುದು ತಂಡಕ್ಕೆ ಆಘಾತ ಮೂಡಿಸಿದೆ. ಭಾರತದ ಬ್ಯಾಟಿಂಗ್ ವಿಭಾಗದ ಬಲವನ್ನ ಸಹ ಕುಗ್ಗಿಸಿದೆ.
ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್, ಏಕದಿನ ವಿಶ್ವಕಪ್ನಲ್ಲೂ ಇದೇ ಫಾರ್ಮ್ ಮುಂದುವರಿಸುವ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಆಸೀಸ್ ವಿರುದ್ಧದ ಪಂದ್ಯದ ಬೆನ್ನಲ್ಲೇ ಡೆಂಘೀ ಜ್ವರದಿಂದ ಬಳಲುತ್ತಿರುವುದು ಗಿಲ್ ಮಾತ್ರವಲ್ಲದೆ, ಟೀಂ ಇಂಡಿಯಾದ ಅಭಿಮಾನಿಗಳಿಗೂ ಭಾರೀ ನಿರಾಸೆ ಮೂಡಿಸಿದೆ. ಭಾರತದ ಆರಂಭಿಕ ಬ್ಯಾಟಿಂಗ್ ಅಸ್ತ್ರವಾಗಿರುವ ಗಿಲ್ ಅವರಿಗೆ ಇದೆ ಚೊಚ್ಚಲ ಏಕದಿನ ವಿಶ್ವಕಪ್ ಟೂರ್ನಿಯಾಗಿದೆ.
ಬಿಸಿಸಿಐ ಪ್ರಕಾರ, “ಚೆನ್ನೈಗೆ ಬಂದಾಗಿನಿಂದ ಶುಭ್ಮನ್ ಗಿಲ್ ಅವರಿಗೆ ಅತಿಯಾದ ಜ್ವರ ಕಾಣಿಸಿಕೊಂಡಿದ್ದು, ಅವರ ವೈದ್ಯಕೀಯ ಪರೀಕ್ಷೆ ಸಹ ನಡೆಸಲಾಗಿದೆ. ಅಲ್ಲದೇ ಇಂದು ಮತ್ತೊಮ್ಮೆ ಪರೀಕ್ಷೆ ನಡೆಸಿದ ಬಳಿಕ ಮೊದಲ ಪಂದ್ಯದಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಲಾಗಿದೆ. ಸದ್ಯ ಡೆಂಘೀ ಜ್ವರದಿಂದ ಬಳಲುತ್ತಿರುವ ಗಿಲ್, ಎಷ್ಟು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂಬ ಆತಂಕ ಸಹ ಮೂಡಿಸಿದೆ. ಸಹಜವಾಗಿ ಡೆಂಘೀ ಜ್ವರದಿಂದ ಚೇತರಿಸಿಕೊಳ್ಳಲು ಕನಿಷ್ಠ 7-8 ದಿನಗಳ ಸಮಯ ಬೇಕಾಗಲಿದೆ. ಹೀಗಾಗಿ ಅ.8ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡ, ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ತನ್ನ 2ನೇ ಪಂದ್ಯವನ್ನಾಡಲಿದ್ದು, ಈ ಪಂದ್ಯಕ್ಕೂ ಸಹ ಶುಭ್ಮನ್ ಗಿಲ್ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಶುಭ್ಮನ್ ಗಿಲ್ ಶೀಘ್ರವಾಗಿ ಗುಣಮುಖರಾಗಲಿ ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಶಯವಾಗಿದೆ.
ಗಿಲ್ ಬದಲು ಕಿಶನ್?
ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಗಿಲ್ ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
CWC 2023, Team India, Shubman Gill, Ishan Kishan, Sports Karnataka