ಏಷ್ಯನ್ ಗೇಮ್ಸ್-2023ರ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಮಿಫೈನಲ್ನಲ್ಲಿ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಫೈನಲ್ಗೆ ಲಗ್ಗೆಯಿಟ್ಟಿದೆ.
ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ಸಂಘಟಿತ ಬೌಲಿಂಗ್ ಪ್ರದರ್ಶನದ ಮೂಲಕ ಬಾಂಗ್ಲಾದೇಶವನ್ನ 96 ರನ್ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಭಾರತ 9.2 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ಗಳಿಸುವ ಮೂಲಕ 9 ವಿಕೆಟ್ಗಳ ಅದ್ಭುತ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಋತುರಾಜ್ ಗಾಯಕ್ವಾಡ್ ಸಾರಥ್ಯದ ಭಾರತ, ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ:
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ ಪರ್ವೇಜ್ ಹೊಸೈನ್(23) ಹಾಗೂ ವಿಕೆಟ್-ಕೀಪರ್ ಜಾಕಿರ್ ಅಲಿ(24*) ಅವರ ಹೊರತಾಗಿ ಯಾರು ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ ಪಡೆ 20 ಓವರ್ಗಳಲ್ಲಿ 96/9 ಅಲ್ಪಮೊತ್ತ ಕಲೆಕಾಕಿತು.
ಸಂಘಟಿತ ಬೌಲಿಂಗ್ ದಾಳಿ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಬೌಲರ್ಗಳು ಸಂಘಟಿತ ಪ್ರದರ್ಶನದ ಮೂಲಕ ಆಸರೆಯಾದರು. ಪ್ರಮುಖವಾಗಿ ಸಾಯಿ ಕಿಶೋರ್(3/12), ವಾಷಿಂಗ್ಟನ್ ಸುಂದರ್(2/15) ಬಾಂಗ್ಲಾದೇಶದ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರೆ. ಅರ್ಶದೀಪ್, ತಿಲಕ್ ವರ್ಮ, ರವಿ ಬಿಷ್ಣೋಯಿ ಹಾಗೂ ಶಹಬಾಜ಼್ ಅಹ್ಮದ್ ಅವರುಗಳು ಸಹ ತಲಾ 1 ವಿಕೆಟ್ ಪಡೆದು ಮಿಂಚಿದರು.
ತಿಲಕ್-ಋತುರಾಜ್ ಅಬ್ಬರ:
ಬಾಂಗ್ಲಾದೇಶ ನೀಡಿದ 97 ರನ್ಗಳ ಸುಲಭದ ಗುರಿ ಬೆನ್ನತ್ತಿದ ಭಾರತ, ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಆದರೆ ನಂತರ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್(40*) ಹಾಗೂ ತಿಲಕ್ ವರ್ಮ(55*) ಅವರ ಜವಾಬ್ದಾರಿಯ ಆಟದಿಂದ ಗೆಲುವು ಸಾಧಿಸಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮ, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ನ ಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾ, ಅ.7ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ತಂಡವನ್ನ ಎದುರಿಸಲಿದೆ. ಈ ಎರಡು ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಇಂದು(ಅ.6) ನಡೆಯಲಿದೆ.
Asian Games, Team India, Bangladesh, T20I Cricket