ತವರಿನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದ್ದು, 3ನೇ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ಗುರಿಯೊಂದಿಗೆ ರೋಹಿತ್ ಶರ್ಮ ಪಡೆ ಸಜ್ಜಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ವಿಶ್ವದ ನಂ.1 ತಂಡವಾಗಿ ಹೊರಹೊಮ್ಮಿರುವ ಭಾರತ ತಂಡದಲ್ಲಿ ಹಲವು ಮಂದಿ ಯುವ ಆಟಗಾರರು ತಮ್ಮ ಚೊಚ್ಚಲ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್ನ ಮೂಲಕ ಮೊದಲ ಬಾರಿಗೆ ಮಹತ್ವದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಕಾಯುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರರ ಲಿಸ್ಟ್ ಇಲ್ಲಿದೆ.
ಶುಭ್ಮನ್ ಗಿಲ್:
ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರನಾಗಿ ಮಿಂಚುತ್ತಿರುವ ಯುವ ಬ್ಯಾಟರ್ ಶುಭ್ಮನ್ ಗಿಲ್, ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. 2023ರಲ್ಲಿ ಸರ್ವಶ್ರೇಷ್ಠ ಫಾರ್ಮ್ನಲ್ಲಿರುವ ಗಿಲ್, ಪ್ರಸಕ್ತ ವರ್ಷದಲ್ಲಿ ಅತ್ಯಧಿಕ ರನ್ಗಳಿಸಿರುವ ಬ್ಯಾಟರ್ಗಳ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ತವರಿನಲ್ಲಿ ನಡೆಯುತ್ತಿರುವ ತಮ್ಮ ಚೊಚ್ಚಲ ವಿಶ್ವಕಪ್ನಲ್ಲಿ ಇದೇ ಫಾರ್ಮ್ ಮುಂದುವರಿಸುವ ತವಕದಲ್ಲಿದ್ದಾರೆ.
ಮೊಹಮ್ಮದ್ ಸಿರಾಜ್:
ಭಾರತದ ಪ್ರಮುಖ ವೇಗದ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಕೂಡ ತಮ್ಮ ಮೊದಲ ವಿಶ್ವಕಪ್ನಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಆಕ್ರಮಣಕಾರಿ ಬೌಲಿಂಗ್ನಿಂದ ತಂಡಕ್ಕೆ ಪ್ರಶಸ್ತಿ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿರಾಜ್, ಐಸಿಸಿ ಏಕದಿನ ಕ್ರಿಕೆಟ್ ಬೌಲರ್ಗಳಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಹೀಗಾಗಿ ಇದೇ ಖುಷಿಯೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಎದುರಾಳಿಗಳಿಗೆ ಕಡಿವಾಣ ಹಾಕುವತ್ತ ಸಿರಾಜ್ ತಯಾರಾಗಿ ನಿಂತಿದ್ದಾರೆ.
ಶ್ರೇಯಸ್ ಅಯ್ಯರ್:
ಗಾಯದ ಸಮಸ್ಯೆ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ಶ್ರೇಯಸ್ ಅಯ್ಯರ್ ಕೂಡ ಮೊದಲ ವಿಶ್ವಕಪ್ಗಾಗಿ ಸಜ್ಜಾಗಿದ್ದಾರೆ. ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್, ವಿಶ್ವಕಪ್ನಲ್ಲಿ ತಮ್ಮ ಬ್ಯಾಟಿಂಗ್ ಲಯ ಮುಂದುವರಿಸಲು ಕಾಯುತ್ತಿದ್ದಾರೆ.
ಇಶಾನ್ ಕಿಶನ್:
ಯುವ ವಿಕೆಟ್-ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಕೂಡ ತಮ್ಮ ಚೊಚ್ಚಲ ವಿಶ್ವಕಪ್ಗಾಗಿ ತಯಾರಿ ಮಾಡಿಕೊಂಡಿದ್ದಾರೆ. ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕಿಶನ್, ವಿಶ್ವಕಪ್ನ ಪ್ಲೇಯಿಂಗ್ ಇಲವೆನ್ನಲ್ಲಿ ಆಡುವ ಅವಕಾಶ ಸಿಕ್ಕಿದ್ದೇ ಆದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಜ್ಜಾಗಿದ್ದಾರೆ.
ಸೂರ್ಯಕುಮಾರ್ ಯಾದವ್:
ಭಾರತ ಕ್ರಿಕೆಟ್ ತಂಡದ ʼಮಿಸ್ಟರ್ 360ʼ ಎಂದೇ ಪ್ರಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ ಅವರಿಗೂ ಇದು ಮೊದಲ ವಿಶ್ವಕಪ್ ಪಂದ್ಯಾವಳಿಯಾಗಿದೆ. ಏಕದಿನ ಕ್ರಿಕೆಟ್ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಸ್ಕೈ, ಸೂಕ್ತ ಸಮಯದಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಹೀಗಾಗಿ ವಿಶ್ವಕಪ್ಗೂ ಮುನ್ನ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಪ್ಲೇಯಿಂಗ್ ಇಲವೆನ್ನಲ್ಲಿ ಅವಕಾಶ ಲಭಿಸಿದ್ದೇ ಆದಲ್ಲಿ ಉತ್ತಮ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿದ್ದಾರೆ.
CWC 2023, Team India, ODI Cricket, World Cup, Sports Karnataka