Commonwealth Games: 12 ಲಕ್ಷ ಟಿಕೆಟ್ ಮಾರಾಟ, ಎಲ್ಲರ ಚಿತ್ತ ಕದ್ದಿರುವ ಭಾರತ-ಪಾಕ್ ಪಂದ್ಯ
ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. 2022ರ ಕಾಮನ್‌ವೆಲ್ತ್ ಗೇಮ್ಸ್ ಜುಲೈ 28ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಈ ಬಾರಿ ಮಹಿಳಾ ಕ್ರಿಕೆಟ್ ಸೇರಿಸಿವುದರಿಂದ ಕ್ರೇಜ್ ಹೆಚ್ಚಾಗುತ್ತಿದ್ದು. ಈವರೆಗೆ 12 ಲಕ್ಷ ಟಿಕೆಟ್ ಮಾರಾಟವಾಗಿದೆ.
ಮಹಿಳಾ ಕ್ರಿಕೆಟ್ ಬಗ್ಗೆ ಜನರಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ಸಂಘಟಕರು ಹೇಳಿದ್ದಾರೆ. ಇದರಲ್ಲೂ ಭಾರತ-ಪಾಕಿಸ್ತಾನ ಟಿ-20 ಪಂದ್ಯದ ಗರಿಷ್ಠ ಟಿಕೆಟ್ ಮಾರಾಟವಾಗಿದೆ. ಈ ಪಂದ್ಯ ಇಲ್ಲಿನ ಜನರ ಗಮನ ಸೆಳೆದಿದೆ. ಜುಲೈ 31 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮತ್ತು ಪಾಕಿಸ್ತಾನದ ಅನೇಕ ಅಭಿಮಾನಿಗಳು ಈ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಆಗ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು.

ಇತ್ತೀಚೆಗಷ್ಟೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಮತ್ತು ಟಿ-20 ಪಂದ್ಯದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು. ಮಹಿಳಾ ಕ್ರಿಕೆಟ್‌ನ ಸೆಮಿಫೈನಲ್ ಮತ್ತು ಫೈನಲ್‌ನ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ಬರ್ಮಿಂಗ್‌ಹ್ಯಾಮ್ ಗೇಮ್ಸ್ ಸಿಇಒ ಇಯಾನ್ ರೀಡ್ ಹೇಳಿದ್ದಾರೆ. ಇದಲ್ಲದೇ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲೂ ಕ್ರೀಡಾಂಗಣ ಪ್ರೇಕ್ಷಕರಿಂದ ತುಂಬಿ ತುಳುಕುತ್ತದೆ.
“ನಾನು ಕ್ರಿಕೆಟ್‌ನ ದೊಡ್ಡ ಅಭಿಮಾನಿ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಒಂದೇ ಗುಂಪಿನಲ್ಲಿವೆ. ಇದು ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರೇಕ್ಷಕರ ಆಸಕ್ತಿಯನ್ನು ಹೆಚ್ಚಿಸಿದೆ. ಇದೊಂದು ಐಕಾನಿಕ್ ಸ್ಥಳವಾಗಿದ್ದು, ಇತ್ತೀಚೆಗೆ ಪುರುಷರ ತಂಡ ಇಲ್ಲಿ ಪಂದ್ಯಗಳನ್ನು ಆಡಿದೆ. ಸೆಮಿಫೈನಲ್ ಮತ್ತು ಫೈನಲ್‌ನ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ತಲುಪುವುದು ಖಚಿತ ಎಂದು ಜನರು ನಂಬಿದ್ದಾರೆ. ಶೀಘ್ರದಲ್ಲೇ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಮಾರಾಟವಾಗಲಿವೆ” ಇಯಾನ್ ರೀಡ್ ತಿಳಿಸಿದ್ದಾರೆ.

ಈ ಬಾರಿ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. 2012 ರ ಲಂಡನ್ ಒಲಿಂಪಿಕ್ಸ್ ನಂತರ ಯುನೈಟೆಡ್ ಕಿಂಗ್‌ಡಂನಲ್ಲಿ ಇದು ಅತಿದೊಡ್ಡ ಕ್ರೀಡಾಕೂಟವಾಗಿದೆ. “ನಾವು ಇಲ್ಲಿಯವರೆಗೆ 12 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ದಿನಾಂಕಗಳು ಹತ್ತಿರವಾಗುತ್ತಿದ್ದಂತೆ ಈ ಸಂಖ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಲಂಡನ್ ಒಲಿಂಪಿಕ್ಸ್ ಬಳಿಕ ದೇಶದಲ್ಲೇ ಅತಿ ದೊಡ್ಡ ಕ್ರೀಡಾಕೂಟ ಇದಾಗಿದೆ” ಎಂದಿದ್ದಾರೆ.
ನಾವು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ 45,000 ಸ್ವಯಂಸೇವಕರನ್ನು ಸಿದ್ಧಪಡಿಸಿದ್ದೇವೆ. ಇದಲ್ಲದೇ ವೇತನ ಪಡೆಯುವ ಸಿಬ್ಬಂದಿಯೂ ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಾರಿ ಎಲ್ಲಾ 72 ಕಾಮನ್‌ವೆಲ್ತ್ ಸದಸ್ಯರು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 72 ತಂಡಗಳು ಭಾಗವಹಿಸುತ್ತಿವೆ.