ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕಾರಣ ಅವರನ್ನು ಆಯ್ಕೆಗಾರರು ಟೆಸ್ಟ್ ತಂಡದಿಂದ ಕೈಬಿಟ್ಟಿದ್ದರು. ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಲು, ಈ ಬ್ಯಾಟ್ಸ್‌ಮನ್ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದರು. ಮತ್ತು ಅವರ ಬ್ಯಾಟ್ ಆರ್ಭಟ ಉಪಖಂಡಗಳನ್ನು ದಾಟಿ ಭಾರತದಲ್ಲೂ ಸದ್ದು ಮಾಡುತ್ತಿದೆ. ಮೂರು ಪಂದ್ಯಗಳನ್ನು ಆಡಿದ ನಂತರ, ಪೂಜಾರ ಕೌಂಟಿಯಲ್ಲಿ ಸಸೆಕ್ಸ್ ತಂಡದ ಪರ ಎರಡು ದ್ವಿಶತಕಗಳನ್ನು ಸಿಡಿಸಿದ್ದಾರೆ. ಶನಿವಾರ ಡರ್ಹಾಮ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 203 ರನ್ ಗಳಿಸಿ ಫಾರ್ಮ್ ಕಂಡುಕೊಂಡಿದ್ದಾರೆ.

ಭಾರತ ಟೆಸ್ಟ್ ತಂಡಕ್ಕೆ ಮರಳುವ ಉದ್ದೇಶದಿಂದ ಇಂಗ್ಲೆಂಡ್‌ಗೆ ತೆರಳಿದ್ದ ಚೇತೇಶ್ವರ ಪೂಜಾರ ಸತತ ಎರಡನೇ ಪಂದ್ಯದಲ್ಲಿ ಸಸೆಕ್ಸ್ ಪರ ದ್ವಿಶತಕ ಬಾರಿಸಿದರು. ಕೌಂಟಿ ಚಾಂಪಿಯನ್‌ಶಿಪ್‌ನ ಎರಡನೇ ವಿಭಾಗದಲ್ಲಿ ಡರ್ಹಾಮ್ ವಿರುದ್ಧದ ಈ ನಾಲ್ಕು ದಿನಗಳ ಪಂದ್ಯದಲ್ಲಿ, ಪೂಜಾರ ಶನಿವಾರ 334 ಎಸೆತಗಳಲ್ಲಿ 203 ರನ್‌ಗಳಿಸಿ ಔಟಾದರು. 107 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಅನುಭವಿ ಬ್ಯಾಟ್ಸ್‌ಮನ್ ಅವರ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಸೇರಿವೆ.

ಅವರ ದ್ವಿಶತಕದ ನೆರವಿನಿಂದ ಸಸೆಕ್ಸ್ 538 ರನ್ ಗಳಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 315 ರನ್ ಮುನ್ನಡೆ ಸಾಧಿಸಿತು. ಭಾರತ ತಂಡದಲ್ಲಿ ಪುನರಾಗಮನದ ನಿರೀಕ್ಷೆಯಲ್ಲಿರುವ ಪೂಜಾರ ಐದು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ. ಡರ್ಬಿಶೈರ್ ವಿರುದ್ಧ ಫಾಲೋ-ಆನ್ ಪಡೆದ ನಂತರ ತಂಡ ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇಲ್ಲಿಯವರೆಗೆ, ಮೂರು ಕೌಂಟಿ ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ, ಪೂಜಾರ 132 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನ ಎರಡನೇ ವಿಭಾಗದಲ್ಲಿ ಪೂಜಾರ ಮೂರು ಶತಕ ಮತ್ತು ಎರಡು ದ್ವಿಶತಕ ಸೇರಿದಂತೆ 531 ರನ್ ಗಳಿಸಿದ್ದಾರೆ. ರನ್ ಗಳಿಸಿದ ವಿಷಯದಲ್ಲಿ ಶಾನ್ ಮಸೂದ್ ನಂತರ ಎರಡನೇ ಸ್ಥಾನದಲ್ಲಿ ಪೂಜಾರ ಕಾಣಿಸಿಕೊಳ್ಳುತ್ತಾರೆ.