Cheteshwar Pujara – ಸಸೆಕ್ಸ್ ಕೌಂಟಿ ತಂಡದ ರನ್ ಮೆಷಿನ್..!

ಚೇತೇಶ್ವರ ಪೂಜಾರ.. ಆಧುನಿಕ ಟೆಸ್ಟ್ ಕ್ರಿಕೆಟ್ ನ ಸಾಂಪ್ರಾಯಿಕ ಶೈಲಿಯ ಆಟಗಾರ. ಟೀಮ್ ಇಂಡಿಯಾ ಟೆಸ್ಟ್ ತಂಡದ ಕಾವಲುಗಾರ ಕೂಡ ಹೌದು.
ಆದ್ರೆ ಕಳೆದ ಎರಡು ಮೂರು ವರ್ಷಗಳಿಂದ ಚೇತೇಶ್ವರ ಪೂಜಾರ ನಿರೀಕ್ಷಿತ ಮಟ್ಟದ ರನ್ ಗಳನ್ನು ಗಳಿಸಿಲ್ಲ. ಹೀಗಾಗಿ ಟೀಮ್ ಇಂಡಿಯಾದಿಂದ ಹೊರನಡೆಯುವ ಪರಿಸ್ಥಿತಿ ಕೂಡ ಎದುರಾಗಿತ್ತು.
ಆದ್ರೂ ಚೇತೇಶ್ವರ ಪೂಜಾರ ಸದ್ಯದ ಮಟ್ಟಿಗೆ ಟೀಮ್ ಇಂಡಿಯಾಗೆ ಅನಿವಾರ್ಯವಾಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ಪೂಜಾರ ಅರ್ಧಶತಕ ಗಳಿಸಿ ಗಮನ ಸೆಳೆದಿದ್ರು. ಆದ್ರೂ ಮೊದಲ ಇನಿಂಗ್ಸ್ ನಲ್ಲಿ ನಿರಾಸೆ ಮೂಡಿಸಿದ್ದರು.
ಹೌದು, ಕಳಪೆ ಫಾರ್ಮ್ ನಿಂದ ಹೊರಬರಲು ಚೇತೇಶ್ವರ ಪೂಜಾರ ಆಯ್ಕೆ ಮಾಡಿಕೊಂಡಿದ್ದು ಇಂಗ್ಲೆಂಡ್ ಕೌಂಟಿ ಟೂರ್ನಿಗಳನ್ನು . ಈ ಹಿಂದೆ ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಕೂಡ ಕೌಂಟಿ ತಂಡಗಳಲ್ಲಿ ಆಡುವ ಮೂಲಕ ತನ್ನ ಆಟದ ಗುಣಮಟ್ಟವನ್ನು ಸುಧಾರಣೆ ಮಾಡಿಕೊಳ್ಳುತ್ತಿದ್ದರು.

ಹಾಗೇ ಚೇತೇಶ್ವರ ಪೂಜಾರ ಕೂಡ ಅದೇ ಹಾದಿಯಲ್ಲಿ ಮುನ್ನೆಡೆಯುತ್ತಿದ್ದಾರೆ. ಇಂಗ್ಲೆಂಡ್ ನ ಸಸೆಕ್ಸ್ ಕೌಂಟಿ ತಂಡದ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಮುನ್ನವೇ ಅವರು ಕೌಂಟಿ ಟೂರ್ನಿಗಳಲ್ಲಿ ಆಡಿದ್ದರು. ಬಳಿಕ ಮತ್ತೆ ಕೌಂಟಿ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ.
ಇದೀಗ ಚೇತೇಶ್ವರ ಪೂಜಾರ ಅವರು ಹೆಡ್ ಲೈನ್ ಸುದ್ದಿಯಾಗಿದ್ದಾರೆ. ಸಸೆಕ್ಸ್ ತಂಡದ ಪರ ಐದನೇ ಶತಕ ದಾಖಲಿಸಿ ಮಿಂಚು ಹರಿಸಿದ್ದಾರೆ. ಅದು ಕೂಡ ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಣದಲ್ಲಿ ಶತಕ ದಾಖಲಿಸಿರುವುದು ವಿಶೇಷವಾಗಿದೆ. ಜೊತೆಗೆ ಸಸೆಕ್ಸ್ ತಂಡದ ಹಂಗಾಮಿ ನಾಯಕ ಕೂಡ ಆಗಿದ್ದಾರೆ.
ಮೆಡ್ಲ್‍ಸೆಕ್ಸ್ ತಂಡ ವಿರುದ್ದ ಆಕರ್ಷಕ ಶತಕ ಸಿಡಿಸಿರುವ ಚೇತೇಶ್ವರ ಬ್ಯಾಟಿಂಗ್ ವೈಖರಿಗೆ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಸಸೆಕ್ಸ್ ತಂಡದ ರನ್ ಮೆಷಿನ್ ಅಂತನೂ ಖ್ಯಾತಿ ಪಡೆದುಕೊಂಡಿದ್ದಾರೆ.
ಸದ್ಯ ಒಟ್ಟು ಎಂಟು ಇನಿಂಗ್ಸ್ ಗಳಲ್ಲಿ 881 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ದ್ವಿಶತಕ ಹಾಗೂ ಮೂರು ಶತಕಗಳು ಸೇರಿಕೊಂಡಿವೆ.
ಒಟ್ಟಿನಲ್ಲಿ ಚೇತೇಶ್ವರ ಪೂಜಾರ ಅವರು ಕಳೆದುಕೊಂಡಿದ್ದ ಫಾರ್ಮ್ ಅನ್ನು ಮತ್ತೆ ಪಡೆದುಕೊಳ್ಳುತ್ತಿದ್ದಾರೆ. ಮುಂಬರುವ ಟೀಮ್ ಇಂಡಿಯಾದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.