ಐಪಿಎಲ್ನಲ್ಲಿ ಮಂಗಳವಾರ ನಡೆಯುವುದು ಸದರ್ನ್ ಡರ್ಬಿ. ಬದ್ಧವೈರಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯಲಿವೆ. ದಾಖಲೆಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಲೆಕ್ಕದಲ್ಲಿ ಮುಂದೆ ಇದೆ. ಆದರೆ ಈಗಿರುವ ಫಾರ್ಮ್ ವಿಶ್ವಾಸಕ್ಕೆ ಹೊಡೆತ ಕೊಟ್ಟಿದೆ. ಮತ್ತೊಂದು ಕಡೆಯಲ್ಲಿ ಆರ್ಸಿಬಿಯೂ ಸ್ಥಿರತೆಯ ಆಟ ಪ್ರದರ್ಶಿಸಲು ಎಡವಿದೆ.
ಆರ್ ಸಿಬಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 4 ಪಂದ್ಯಗಳಲ್ಲಿ ಸೋತಿದ್ದು ಒಂದನ್ನೇ. ಮೂರು ಪಂದ್ಯಗಳಲ್ಲಿ ಗೆದ್ದಿದ್ದರೂ ರನ್ ರೇಟ್ ದೊಡ್ಡ ಮಟ್ಟದಲ್ಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್, ಅನೂಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಟಾಪ್ ಆರ್ಡರ್ನ ಆಧಾರಗಳು. ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಮತ್ತು ಶಹಬಾಝ್ ಅಹ್ಮದ್ ಮಿಡಲ್ ಹಾಗು ಲೋವರ್ ಮಿಡಲ್ ಆರ್ಡರ್ನ ಶಕ್ತಿಗಳು. ವನಿಂದು ಹಸರಂಗ ಮತ್ತು ಡೇವಿಡ್ ವಿಲ್ಲಿ ಆಲ್ರೌಂಡರ್ಗಳು. ಹರ್ಷಲ್ ಪಟೇಲ್ ಅನುಪಸ್ಥಿತಿಯಲ್ಲಿ ಸಿದ್ಧಾರ್ಥ್ ಕೌಲ್ ಸ್ಥಾನ ಪಡೆಯಬಹುದು. ಸಿರಾಜ್ ದುಬಾರಿಯಾದರೂ ಬೌಲಿಂಗ್ ಲೈನ್ ಅಪ್ನಲ್ಲಿರುವುದು ಅನಿವಾರ್ಯ. ಆಕಾಶ್ ದೀಪ್ ಇಂಪ್ರೆಸ್ಸಿವ್ ಆಗಿರುವುದರಿಂದ ಮತ್ತೊಂದು ಅವಕಾಶ ಪಡೆಯಬಹುದು.
ಸಿಎಸ್ಕೆ:
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಾಕಷ್ಟು ತಲೆನೋವಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ತಲೆನೋವು ಒಂದು ಕಡೆಯಾದರೆ ಗೆಲ್ಲುತ್ತಿಲ್ಲ ಅನ್ನುವ ಒತ್ತಡವಿದೆ. 4 ಪಂದ್ಯಗಳಲ್ಲೂ ಸೋತಿರುವ ಚೆನ್ನೈ ಈ ಪಂದಯದಲ್ಲಿ ಕೆಲ ಬದಲಾವಣೆ ಮಾಡಬಹುದು. ರಾಬಿನ್ ಉತ್ತಪ್ಪ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. ಮೊಯಿನ್ ಅಲಿಯ ಸ್ಥಾನವೂ ಭದ್ರ. ಆದರೆ ಅಂಬಟಿ ರಾಯುಡು ಜಾಗದಲ್ಲಿ ಶುಭ್ರಾಂಶು ಸೇನಾಪತಿಯನ್ನು ಆಡಿಸುವ ಸಾಧ್ಯತೆ ಇದೆ. ಶಿವಂ ದುಬೆ ಸ್ಥಾನವೂ ಗಟ್ಟಿ. ಜಡೇಜಾ, ಧೋನಿ ಮತ್ತು ಬ್ರಾವೋ ಆಡುವುದು ಗ್ಯಾರೆಂಟಿ. ತೀಕ್ಷಣ ಬದಲು ಡ್ವೈನ್ ಪ್ರಿಟೋರಿಯಸ್ ಮತ್ತೆ ತಂಡ ಸೇರಬಹುದು. ಮಕೇಶ್ ಚೌಧರಿ ಮತ್ತು ರಾಜ್ವರ್ಧನ್ ಹಂಗರ್ಗೇಕರ್ ಆಡುವ ಸಾಧ್ಯತೆಗು ಇದೆ.
ಪಿಚ್ ಕಂಡೀಷನ್:
ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಟಾಸ್ ಮತ್ತು ಡ್ಯೂ ಫ್ಯಾಕ್ಟರ್ ಫಲಿತಾಂಶ ನಿರ್ಧಾರ ಮಾಡುವ ಅಂಶಗಳು ಅನ್ನುವ ಬಗ್ಗೆ ಚರ್ಚೆ ಇಲ್ಲ.