ಐಪಿಎಲ್ 15ನೇ ಆವೃತ್ತಿಗೆ ಎಲ್ಲಾ ತಯಾರಿಗಳು ನಡೆಯುತ್ತಿವೆ. ತಂಡಗಳು ರಿಟೈನ್ ಮಾಡಿಕೊಳ್ಳುವ ಆಟಗಾರರ ಹೆಸರು ಬಹಿರಂಗವಾಗಿದೆ. 8 ಫ್ರಾಂಚೈಸಿಗಳಿಂದ ಕೇವಲ 27 ಆಟಗಾರರು ಮಾತ್ರ ರಿಟೈನ್ ಆಗಿದ್ದಾರೆ. ಹಲವು ಖ್ಯಾತ ಆಟಗಾರರು ಮೆಗಾ ಹರಾಜಿನ ಭಾಗವಾಗಲಿದ್ದಾರೆ.
ಆರ್ಸಿಬಿ ತಂಡ ಕೂಡ ತನ್ನ ರಿಟೈನ್ಡ್ ಆಟಗಾರರ ಹೆಸರು ಫೈನಲ್ ಮಾಡಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ ಮಾತ್ರ ಆರ್ಸಿಬಿಯಲ್ಲಿ ಉಳಿದುಕೊಂಡಿದ್ದಾರೆ. ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್ ಮತ್ತು ದೇವದತ್ ಪಡಿಕ್ಕಲ್ ರಂತಹ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಿದ್ದಾರೆ. ಆರ್ಸಿಬಿ ತಂಡದಿಂದ ಚಹಲ್ ಹೊರಬೀಳುತ್ತಿದ್ದಂತೆ ಲೆಗ್ ಸ್ಪಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ ಎಂಬ ಗುಮಾನಿಯೊಂದು ಶುರುವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರತೀಯ ಲೆಗ್ಸ್ಪಿನ್ನರ್ಗಾಗಿ ಹಲವು ವರ್ಷಗಳಿಂದ ಹುಡುಕಾಡುತ್ತಿದೆ. ಹೀಗಾಗಿ ಚಹಲ್ಗೆ ಗಾಳ ಹಾಕುವ ಯೋಚನೆಯಲ್ಲಿದೆ. ಇತ್ತ ಆರ್ಸಿಬಿ ಕೂಡ ಹರಾಜಿನಲ್ಲಿ ಚಹಲ್ಗೆ ಬಲೆ ಬೀಸಬಹುದು. ಉಳಿದ ತಂಡಗಳು ಕೂಡ ಚಹಲ್ಗಾಗಿ ಯೋಚನೆ ರೂಪಿಸಿವೆ. ಹೀಗಾಗಿ ಚಹಲ್ ದುಬಾರಿ ಬೆಲೆಗೆ ಬಿಕರಿಯಾಗಬಹುದು ಅನ್ನುವ ಲೆಕ್ಕಾಚಾರ ನಡೆಯುತ್ತಿದೆ.
2011 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಚಹಲ್ 2014 ರಲ್ಲಿ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. 7 ಸೀಸನ್ಗಳ ಬಳಿಕ ಯುಜುವೇಂದ್ರ ಚಹಲ್ ಆರ್ಸಿಬಿ ತಂಡದಿಂದ ಹೊರ ನಡೆದಿದ್ದಾರೆ.