ಟೆನಿಸ್ ಲೋಕದಲ್ಲಿ ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜಾಕೋವಿಕ್ ಬಳಿಕ ಯಾರು ಅನ್ನುವ ಚರ್ಚೆ ಜೋರಾಗಿತ್ತು. ಫೆಡರರ್ ಈಗಾಗಲೇ ಟೆನಿಸ್ ನಿಂದ ಬಹಳಷ್ಟು ದೂರ ಹೋಗಿದ್ದಾರೆ. ನಡಾಲ್ ಮತ್ತು ಜಾಕೋವಿಕ್ ನಡುವೆ ಸ್ಪರ್ಧೆ ಇದ್ದರೂ ಇಬ್ಬರಿಗೂ ನಿವೃತ್ತಿಯ ವಯಸ್ಸಾಗಿದೆ. ಹೀಗಾಗಿ ಟೆನಿಸ್ ಲೋಕದ ಮುಂದಿನ ರಾಜನಿಗಾಗಿ ಹುಡುಕಾಟ ನಡೆಯುತ್ತಿತ್ತು
ಪ್ರತಿಷ್ಠಿತ ಫ್ರೆಂಚ್ ಓಪನ್ ಗೆ ಕೇವಲ ಒಂದು ವಾರ ಬಾಕಿ ಇದೆ. ಇದೇ ವೇಳೆ ಮ್ಯಾಡ್ರಿಡ್ ಟೆನಿಸ್ ಟೂರ್ನಿಯಲ್ಲಿ ಹೊಸ ತಾರೆಯ ಉದಯವಾಗಿದೆ. ದಿಗ್ಗಜ ಆಟಗಾರರನ್ನು ಮಣಿಸಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಾರ್ಲೋಸ್ ಆಲ್ಕಾರಾಜ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ದಿಗ್ಗಜ ಟೆನಿಸಿಗರಾದ ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್‌ರನ್ನು ಸ್ಪೇನ್‌ನ 19 ವರ್ಷದ ಆಟಗಾರ ಕಾರ್ಲೋಸ್ ಆಲ್ಕಾರಾಜ್ ಸತತ 2 ದಿನಗಳಲ್ಲಿ ಸೋಲಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು. ಫೈನಲ್‌ನಲ್ಲಿ ಇದೀಗ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಜ್ವರೇವ್ ವಿರುದ್ದ 6-3, 6-1 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾರ್ಲೋಸ್ ವೃತ್ತಿಜೀವನದ ಎರಡನೇ ಎಟಿಪಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮ್ಯಾಡ್ರಿಡ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ವಿರುದ್ಧ ಜಯಿಸಿದ ಕಾರ್ಲೋಸ್, ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಜೋಕೋವಿಚ್ ವಿರುದ್ಧ ಜಯಗಳಿಸಿದರು. ಭಾನುವಾರ ನಡೆದ ಫೈನಲ್ ಕಾದಾಟದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಆವೆ ಮಣ್ಣಿನ ಅಂಕಣದಲ್ಲಿ ಸತತ 2 ದಿನ ಈ ಇಬ್ಬರು ದಿಗ್ಗಜರನ್ನು ಸೋಲಿಸಿದ ಮೊದಲಿಗ ಎನ್ನುವ ದಾಖಲೆ ಬರೆದರು. ಮೇ 16ರಿಂದ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಆರಂಭಗೊಳ್ಳಲಿದ್ದು, ಕಾರ್ಲೋಸ್ ಆಲ್ಕಾರಾಜ್ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.