ಬಹುನಿರೀಕ್ಷಿತ ಇಂಗ್ಲೆಂಡ್ ಹಾಗೂ ಭಾರತ ನಡುವಣ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಎರಡನೇ ದಿನದ ಸಂಪೂರ್ಣ ಗೌರವವನ್ನು ತನ್ನದಾಗಿಸಿಕೊಂಡಿದೆ. ಎರಡನೇ ದಿನದಾಟಕ್ಕೆ ಮಳೆ ಕಾಟ ನೀಡಿದರೂ, ಟೀಮ್ ಇಂಡಿಯಾದ ಪೇಸ್ ಬೌಲರ್ಸ್ ಅಬ್ಬರಿಸಿದರು.
ಶನಿವಾರ ಮೊದಲ ಇನ್ನಿಂಗ್ಸ್ ನ್ನು 7 ವಿಕೆಟ್ ಗೆ 338 ರನ್ ಗಳಿಂದ ಮುಂದುವರಿಸಿದ ಭಾರತ 416 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 5 ವಿಕೆಟ್ ಗೆ 84 ರನ್ ಗಳನ್ನು ಕಲೆ ಹಾಕಿದೆ. ಇಂಗ್ಲೆಂಡ್ ತಂಡದ ಪರ ಜಾನಿ ಬೇರ್ ಸ್ಟೋ (ಅಜೇಯ 12), ನಾಯಕ ಬೆನ್ ಸ್ಟೋಕ್ಸ್ (ಅಜೇಯ 0) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಇಂಗ್ಲೆಂಡ್ ಗೆ ಇನ್ನು 332 ರನ್ ಅವಶ್ಯಕತೆ ಇದೆ. ಮಳೆ ಬಾಧಿತ ಪಂದ್ಯದಲ್ಲಿ ಎರಡನೇ ದಿನ ಕೇವಲ ಸುಮಾರು 39 ಓವರ್ ಗಳ ಆಟ ಮಾತ್ರ ನಡೆಯಿತು.

ರವೀಂದ್ರ ಜಡೇಜಾಗೆ ಮೊಹಮ್ಮದ್ ಶಮಿ ಉತ್ತಮ ಸಾಥ್ ನೀಡಿದರು. ಈ ಜೋಡಿ 48 ರನ್ಗಳ ಜೊತೆಯಾಟವನ್ನು ಆಡಿತು. 83 ರನ್ಗಳಿಂದ ಬ್ಯಾಟಿಂಗ್ ಆರಂಭಿಸಿದ್ದ ಜಡೇಜಾ ಬೌಂಡರಿ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 3ನೇ ಶತಕ ಸಂಭ್ರಮ ಆಚರಿಸಿದರು.
ಹೊಸ ಚೆಂಡಿನಲ್ಲಿ ಸ್ಟುವರ್ಟ್ ಬ್ರಾಡ್ 16 ರನ್ಗಳಿಸಿದ ಶಮಿ ವಿಕೆಟ್ ಪಡೆದರು. 104 ರನ್ಗಳಿಸಿದ್ದ ಜಡೇಜಾ ಆ್ಯಂಡರ್ಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಆದರೆ 84ನೇ ಓವರ್ನಲ್ಲಿ ಜಸ್ಪ್ರಿತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ 29 ರನ್ಗಳಿಸಿದರು. ಇದು ವಿಶ್ವ ದಾಖಲೆಯಾಯಿತು. ಆ ಓವರ್ನಲ್ಲಿ ಬ್ರಾಡ್ 35 ರನ್ ಬಿಟ್ಟುಕೊಟ್ಟು ಟೆಸ್ಟ್ ಇತಿಹಾಸದ ದುಬಾರಿ ಓವರ್ ಎಸೆದರು.
ಮೊಹಮ್ಮದ್ ಸಿರಾಜ್ ಅವರಿಗೆ ಜೇಮ್ಸ್ ಆಂಡರ್ಸನ್ ಖೆಡ್ಡಾ ತೋಡಿದರು. ಪರಿಣಾಮ ಟೀಮ್ ಇಂಡಿಯಾ 416 ರನ್ ಗಳಿಗೆ ಸರ್ವಪತನವಾಯಿತು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಅಲೆಕ್ಸ್ ಲೀಸ್ 6 ರನ್ ಗಳಿಸಿದ್ದಾಗ ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು. ಜಾಕ್ ಕ್ರಾಲಿ ಅವರು ಟೀಮ್ ಇಂಡಿಯಾದ ನಾಯಕ ಜಸ್ಪ್ರಿತ್ ಬುಮ್ರಾ ಅವರ ಫುಲ್ ಲೆಂತ್ ಎಸೆತದಲ್ಲಿ ಡ್ರೈವ್ ಮಾಡಲು ಮುಂದಾದರು. ಆದರೆ ಚೆಂಡನ್ನು ಇವರ ಬ್ಯಾಟ್ ಗೆ ತಾಗಿ ಸ್ಲಿಪ್ ನಲ್ಲಿ ಶುಭಮನ್ ಗಿಲ್ ಕೈ ಸೇರಿತು. ಮಧ್ಯಮ ಕ್ರಮಾಂಕದ ಓಲಿ ಪೋಪ್ ಸಹ ಬುಮ್ರಾ ಎಸೆತವನ್ನು ತಪ್ಪಾಗಿ ಗ್ರಹಿಸಿ ಔಟ್ ಆದರು.

ಜೋ ರೂಟ್ ಹಾಗೂ ಜಾನಿ ಬೇರ್ ಸ್ಟೋ ಜೋಡಿ ತಂಡವನ್ನು ಸಂಕಷ್ಟದಿಂದ ಮೇಲೆತ್ತುವ ಹೊಣೆಯನ್ನು ಹೊತ್ತುಕೊಂಡರು. ಆದರೆ ಇವರ ಆಸೆಗೆ ಮೊಹಮ್ಮದ್ ಸಿರಾಜ್ ಬ್ರೇಕ್ ಹಾಕಿದರು. ಸಿರಾಜ್ ಅವರ ಎಸೆತದಲ್ಲಿ ರೂಟ್ ಅವರ ಬ್ಯಾಟ್ ತಾಗಿದ ಚೆಂಡು ವಿಕೆಟ್ ಕೀಪರ್ ರಿಷಭ್ ಪಂತ್ ಕೈ ಸೇರುತ್ತಿದ್ದಂತೆ ಸಂತಸ ಮುಗಿಲು ಮುಟ್ಟಿತು.
ನಂತರ ಮೊಹಮ್ಮದ್ ಶಮಿ ಸಹ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ ಮನ್ ಜಾಕ್ ಲೀಚ್ ಅವರಿಗೆ ಪ್ಲಾನ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು.