ತಮ್ಮ ಚಾಣಾಕ್ಷ ಸ್ಪಿನ್ ಬೌಲಿಂಗ್ ಮೂಲಕ ಐಪಿಎಲ್ನಲ್ಲಿ ಮೋಡಿ ಮಾಡಿದ್ದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯವಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ 21 ವರ್ಷದ ಬಿಷ್ಣೋಯಿ, ಆ ಮೂಲಕ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಬಿಷ್ಣೋಯಿ, ಕೇವಲ 17 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಕೆರೆಬಿಯನ್ ಬ್ಯಾಟ್ಸಮನ್ಗಳಿಗೆ ಕಂಟಕವಾದರು. ರವಿ ಬಿಷ್ಣೋಯಿ ಅವರ ಈ ಪ್ರದರ್ಶನ ನಾಯಕನನ್ನು ಆಕರ್ಷಿಸಿದೆ.
ಪಂದ್ಯದ ನಂತರ ಮಾತನಾಡಿದ ರೋಹಿತ್, ಮೊದಲ ಟಿ20 ಪಂದ್ಯದಲ್ಲೇ ರವಿ ಬಿಷ್ಣೋಯಿ ಲೆಗ್ ಬ್ರೇಕ್ಗಳಿಗಿಂತ ಹೆಚ್ಚು ಗೂಗ್ಲಿಗಳನ್ನು ಮಾಡಿದ್ದು, ಖಂಡಿತವಾಗಿಯೂ ಭಾರತ ರವಿ ಬಿಷ್ಣೋಯಿ ಅವರಲ್ಲಿ ಇನ್ನಷ್ಟು ವಿಭಿನ್ನತೆಯನ್ನು ನೋಡುತ್ತಿದೆ ಎಂದು ಯುವ ಸ್ಪಿನ್ನರ್ ಪ್ರದರ್ಶನವನ್ನು ಹೊಗಳಿದ್ದಾರೆ.
ಅಲ್ಲದೇ ಬಿಷ್ಣೋಯಿ ಅವರು ಏಕದಿನ ತಂಡದ ಭಾಗವಾಗಿದ್ದರು, ಆದರೆ ತಂಡವು ಅವರನ್ನು ನೇರವಾಗಿ ಟಿ20 ಪಂದ್ಯದಲ್ಲಿ ಆಡಲು ಬಯಸಿತ್ತು. ಯುವ ಲೆಗ್ ಸ್ಪಿನ್ನರ್ ಅವರಿಗೆ ಉಜ್ವಲ ಭವಿಷ್ಯವಿದೆ. ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ಬಿಷ್ಣೋಯಿ ಅವರನ್ನು ಡ್ರಾಫ್ಟ್ ಮಾಡಿರುವುದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ ಈ ಯುವ ಸ್ಪಿನ್ನರ್ ಉನ್ನತ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವುದನ್ನು ಮುಂದುವರಿಸಿದ್ದಾರೆ ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮ ಹೇಳಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ, ಇಬ್ಬರು ರಿಸ್ಟ್ ಸ್ಪಿನ್ನರ್ಗಳನ್ನ ಕಣಕ್ಕಿಳಿಸಿತ್ತು. ಈ ನಡುವೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬಿಷ್ಣೋಯಿ, ಚೊಚ್ಚಲ ಟಿ20 ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಚಹಲ್ ಹಾಗೂ ಬಿಷ್ಣೋಯಿ ಜೋಡಿ, ಮೂರು ಪ್ರಮುಖ ವಿಕೆಟ್ಗಳನ್ನು ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು.