ಬೆಂಗಳೂರಿನಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿಯ 75ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಭರ್ಜರಿ ಪ್ರದರ್ಶನ ನೀಡಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ವಾರಿಯರ್ಸ್ 41-22 ರಿಂದ ಜಯ ಸಾಧಿಸಿತು.
ಈ ಜಯದ ಮೂಲಕ ವಾರಿಯರ್ಸ್ ಆಡಿದ 14 ಪಂದ್ಯಗಳಲ್ಲಿ 7 ಜಯ, 6 ಸೋಲು, 1 ಡ್ರಾ ಕಂಡಿದ್ದು 41 ಅಂಕಗಳನ್ನು ಕಲೆ ಹಾಕಿದ್ದು ಮೂರನೇ ಸ್ಥಾನದಲ್ಲಿದೆ. ಜೈಪುರ್ ತಂಡ 13 ಪಂದ್ಯಗಳಲ್ಲಿ 35 ಅಂಕ ಸೇರಿಸಿದ್ದು, ಎಂಟನೇ ಸ್ಥಾನದಲ್ಲಿದೆ.
ಮೊದಲಾವಧಿಯ ಆಟದಲ್ಲಿ ಬೆಂಗಾಲ್ 14-11 ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ವಾರಿಯರ್ಸ್ ತಂಡ ದಾಳಿಯಲ್ಲಿ ಸೊಗಸಾದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಎರಡನೇ ಅವಧಿಯಲ್ಲಿ ಬೆಂಗಾಲ್ ಎದುರಾಳಿ ತಂಡವನ್ನು ಮೂರು ಬಾರಿ ಆಲೌಟ್ ಮಾಡಿ ಬೋನಸ್ ಅಂಕವನ್ನು ತನ್ನದಾಗಿಸಿಕೊಂಡಿತು.
ಒಟ್ಟಾರೆ ಪಂದ್ಯದಲ್ಲಿ ವಾರಿಯರ್ಸ್ 42 ಬಾರಿ ದಾಳಿ ನಡೆಸಿ 18 ಅಂಕ ಕಲೆ ಹಾಕಿತು. ಇಷ್ಟೇ ಬಾರಿ ರೈಡ್ ಮಾಡಿದ ಪ್ಯಾಂಥರ್ಸ್ 14 ಅಂಕ ತಮ್ಮದಾಗಿಸಿಕೊಂಡಿತು. ಅಲ್ಲದೆ ಉಭಯ ತಂಡಗಳು ತಲಾ ಒಂದು ಬಾರಿ ಸೂಪರ್ ರೈಡ್ ನಡೆಸಿದವು. ಟ್ಯಾಕಲ್ ನಲ್ಲಿ ವಾರಿಯರ್ಸ್ ಮನಮೋಹಕ ಪ್ರದರ್ಶನ ನೀಡಿ 10 ಎದುರಾಳಿ ಆಟಗಾರರನ್ನು ಬಲೆಗೆ ಕೆಡವಿತು. ವಿಜೇತ ತಂಡದ ಪರ ಮಣಿಂದರ್ 13, ಆಲ್ ರೌಂಡರ್ ಮೊಹಮ್ಮದ್ 6 ಅಂಕ ಸಂಪಾದಿಸಿದರು.