ಇಂಗ್ಲೆಂಡ್(England) ತಂಡದ ಸ್ಟಾರ್ ಆಲ್ರೌಂಡರ್ ಹಾಗೂ 2019ರ ODI ವಿಶ್ವಕಪ್ ಗೆಲುವಿನ ಹೀರೋ ಬೆನ್ ಸ್ಟೋಕ್ಸ್(Ben Stokes) ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ್ದು, ಜು.19ರಂದು ತವರಿನಲ್ಲಿ ನಡೆಯುವ ಸೌತ್ ಆಫ್ರಿಕಾ ವಿರುದ್ಧ ODI ಪಂದ್ಯದಲ್ಲಿ ಬೆನ್ ಸ್ಟೋಕ್ಸ್, ತಮ್ಮ ಕೊನೆಯ ಪಂದ್ಯವಾಡಲಿದ್ದಾರೆ.
ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್ರೌಂಡರ್ ಎಂಬ ಹೆಗ್ಗಳಿಕೆ ಪಡೆದಿದ್ದ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಹಲವು ಸಂದರ್ಭಗಳಲ್ಲಿ ಆಂಗ್ಲರ ಪಾಲಿನ ಗೆಲುವಿನ ರೂವಾರಿಯಾಗಿದ್ದ ಸ್ಟೋಕ್ಸ್, ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದು, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

“ನಾನು ಮಂಗಳವಾರ ಡರ್ಹಾಮ್‌ನಲ್ಲಿ ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವನ್ನು ODI ಕ್ರಿಕೆಟ್‌ನಲ್ಲಿ ಆಡುತ್ತೇನೆ. ನಾನು ODI ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನ್ನ ಸಹ ಆಟಗಾರರೊಂದಿಗೆ ಆಡಿದ ಪ್ರತಿ ನಿಮಿಷವನ್ನು ಪ್ರೀತಿಸಲಿದ್ದು, ಇಂಗ್ಲೆಂಡ್ ತಂಡಕ್ಕಾಗಿ ಅದ್ಭುತ ಪ್ರಯಾಣ ಮಾಡಿದ್ದೇವೆ. ನಿವೃತ್ತಿ ನಿರ್ಧಾರಕ್ಕೆ ಬರುವುದು ತೀರಾ ಕಷ್ಟಕರವಾಗಿದೆ, ಆದರೆ ನನಗೆ ODI ಕ್ರಿಕೆಟ್‌ನಲ್ಲಿ ನನ್ನ ತಂಡಕ್ಕೆ 100% ನೀಡಲು ಸಾಧ್ಯವಿಲ್ಲ. ಮೂರು ಮಾದರಿ ಕ್ರಿಕೆಟ್ ಆಡುವುದಕ್ಕೆ ನನಗೆ ಸಾಧ್ಯವಾಗುತ್ತಿಲ್ಲ. ನನ್ನ 11 ವರ್ಷಗಳ ಜರ್ನಿಯಲ್ಲಿ ಅವಿಸ್ಮರಣೀಯ ಸಂದರ್ಭಗಳನ್ನು ನೋಡಿದ್ದೇನೆ. ನಾನು ಟೆಸ್ಟ್ ಕ್ರಿಕೆಟ್‌ಗೆ ಎಲ್ಲವನ್ನೂ ನೀಡುತ್ತೇನೆ ಮತ್ತು ಟಿ20 ಕ್ರಿಕೆಟ್‌ಗೆ ಸಂಪೂರ್ಣ ಬದ್ಧತೆಯನ್ನು ನೀಡಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ.
ಮರೆಯಲಾಗದ ಸ್ಟೋಕ್ಸ್ ಆಟ:
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅದರಲ್ಲೂ 2019ರಲ್ಲಿ ನಡೆದ ವಿಶ್ವಕಪ್ ಟೂರ್ನಿಯ ನ್ಯೂಜಿ಼ಲೆಂಡ್ ವಿರುದ್ಧದ ಫೈನಲ್‌ನಲ್ಲಿ ಬೆನ್ ಸ್ಟೋಕ್ಸ್ ಪ್ರದರ್ಶನವನ್ನ ಎಂದಿಗೂ ಮರೆಯೋಕ್ಕೆ ಸಾಧ್ಯವೇ ಇಲ್ಲ. ಲಾರ್ಡ್ಸ್ ಅಂಗಳದಲ್ಲಿ ಸ್ಟೋಕ್ಸ್, ಕೆಚ್ಚೆದೆಯ ಬ್ಯಾಟಿಂಗ್‌ನಿಂದ ಅಜೇಯ 84 ರನ್‌ಗಳಿಸಿದರು. ಇವರ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಸೂಪರ್ ಓವರ್ ಮೂಲಕ ಗೆದ್ದುಬೀಗಿದ ಇಂಗ್ಲೆಂಡ್, ಚೊಚ್ಚಲ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಪಂದ್ಯದ ಗೆಲುವಿನ ಹೀರೋ ಆಗಿದ್ದ ಬೆನ್ ಸ್ಟೋಕ್ಸ್, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. 2011ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದ ಬೆನ್ ಸ್ಟೋಕ್ಸ್, ಏಕದಿನ ಕ್ರಿಕೆಟ್‌ನಲ್ಲಿ 104 ಏಕದಿನ ಪಂದ್ಯ0ಗಳನ್ನು ಆಡಿದ್ದು, 3 ಶತಕ ಹಾಗೂ 74 ವಿಕೆಟ್‌ಗಳೊಂದಿಗೆ 2919 ರನ್‌ಗಳಿಸಿದ್ದಾರೆ.