Team India – ದುಬಾರಿ ವಿಮಾನಯಾನ..! 3.5 ಕೋಟಿ ರೂ.. ಏನಿದು..?

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ವಿದೇಶ ಪ್ರವಾಸ ಮಾಡಲು ಹರಸಾಹಸವನ್ನೇ ಮಾಡಬೇಕಾಗಿತ್ತು. ಆಟಗಾರರ ಭತ್ಯೆ, ಸಂಬಳ, ದಿನದ ಖರ್ಚು ವೆಚ್ಚ ಭರಿಸಲು ಕೂಡ ಪರದಾಡುತ್ತಿತ್ತು.
ಆದ್ರೆ 1983ರ ವಿಶ್ವಕಪ್ ಗೆಲುವಿನ ನಂತರ ಬಿಸಿಸಿಐ ಖಜಾನೆ ನಿಧಾನವಾಗಿ ತುಂಬಲು ಶುರುವಾಗಿತ್ತು. ಅದು 90ರ ದಶಕದಲ್ಲಿ ನೀರಿನಂತೆ ಬಿಸಿಸಿಐ ಬೊಕ್ಕಸ ತುಂಬಿತ್ತು. ಆ ನಂತರ ಐಪಿಎಲ್ ಶುರು ಮಾಡಿದ ಮೇಲೆ ಬಿಸಿಸಿಐ ಖಜಾನೆಗೆ ಪ್ರವಾಹದಂತೆ ಹಣ ಹರಿದು ಬರುತ್ತಿದೆ.
ಸುಮಾರು ಎರಡು ದಶಕಗಳಿಂದಲೂ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಬೆಳೆಯುತ್ತಿದೆ.

ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವತ್ತಿನ ದಿನಗಳಲ್ಲಿ ಆಟಗಾರನೊಬ್ಬ ಟೀಮ್ ಇಂಡಿಯಾ ಪ್ರತಿನಿಧಿಸಿದ್ರೆ ಸಾಕು ದುಡ್ಡಿಗಂತೂ ಬರವಿರಲಿಲ್ಲ. ಅಷ್ಟೇ ಸವಲತ್ತುಗಳು ಕೂಡ ಇರುತ್ತವೆ. ಆದ್ರೆ ನಿವೃತ್ತಿಯಾದ ನಂತರ ಹೇಳುವರೇ ಇರಲ್ಲ ಅದು ಬೇರೆ ಮಾತು.
ಹೌದು, ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಹೈಫೈ ಸೌಲಭ್ಯಗಳನ್ನೇ ನೀಡುತ್ತಿದೆ. ಯಾವುದರಲ್ಲೂ ಕಡಿಮೆಯಾಗದ್ದಂತೆ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರನ್ನು ನೋಡಿಕೊಳ್ಳುತ್ತಿದೆ.
ಇದೀಗ ಬಿಸಿಸಿಐ ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಪ್ರಯಾಣದ ವಿಮಾನ ವೆಚ್ಚವನ್ನು ಕೇಳಿದ್ರೆ ಅಚ್ಚರಿ ಪಡುತ್ತೀರಿ.

ನಿಜ, ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಿಂದ ಟ್ರಿನಿಡಾಡ್‍ಗೆ ಚಾರ್ಟರ್ಡ್ ಫ್ಲೈಟ್ ಅನ್ನು ಬಿಸಿಸಿಐ ಬುಕ್ ಮಾಡಿತ್ತು. ಇದಕ್ಕೆ ಬಿಸಿಸಿಐ ಭರಿಸಿದ್ದ ವೆಚ್ಚ ಬರೋಬ್ಬರಿ 3.5 ಕೋಟಿ ರೂಪಾಯಿ.
ಆದ್ರೆ ಬಿಸಿಸಿಐ ಇಷ್ಟೊಂದು ದುಬಾರಿ ವೆಚ್ಚ ಮಾಡಬೇಕಿತ್ತಾ ಅನ್ನೋದು ಪ್ರಶ್ನೆಯಾಗಿದೆ. ಯಾಕಂದ್ರೆ ಬಿಸಿಸಿಐ ದುಬಾರಿ ವೆಚ್ಚ ಮಾಡಿದ್ದು ಕೋವಿಡ್ ಸೋಂಕಿನ ಆತಂಕದಿಂದ ಅಲ್ಲ. ಬದಲಾಗಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೆ ಮತ್ತು ಸಿಬ್ಬಂದಿಗಳಿಗೆ ಒಂದೇ ವಿಮಾನದಲ್ಲಿ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಹೌದು, ಟೀಮ್ ಇಂಡಿಯಾದಲ್ಲಿ 16 ಆಟಗಾರರು, ಸಿಬ್ಬಂದಿಗಳು ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಇದ್ದಾರೆ. ಹಾಗೇ ಕೆಲವು ಆಟಗಾರರ ಪತ್ನಿಯರು ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಒಂದೇ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಲು ಕಷ್ಟವಾಗಿತ್ತು. ಈ ಕಾರಣಕ್ಕಾಗಿ ಬಿಸಿಸಿಐ 3.5 ಕೋಟಿ ರೂಪಾಯಿ ವೆಚ್ಚ ಮಾಡಿದೆ.
ಈಗಾಗಲೇ ಟೀಮ್ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ನಲ್ಲಿ ಬೀಡು ಬಿಟ್ಟಿದ್ದಾರೆ. ಮೊದಲ ಏಕದಿನ ಪಂದ್ಯ ಜುಲೈ 22ರಂದು ನಡೆಯಲಿದೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
https://twitter.com/BCCI/status/1549566146067800064?ref_src=twsrc%5Etfw%7Ctwcamp%5Etweetembed%7Ctwterm%5E1549566146067800064%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fsports%2Find-vs-wi-bcci-spends-whopping-rs-3-5-cr-for-chartered-flight-for-team-india-from-manchester-to-trinidad-5525740%2F
ಇನ್ನು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿಯವರನ್ನು ಬಿಟ್ಟು ಇನ್ನುಳಿದ ನಾಲ್ಕು ಮಂದಿ ಆಟಗಾರರು ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಯಲ್ಲಿ ಆಡಲಿದ್ದಾರೆ. ಟಿ-20 ಸರಣಿಯಲ್ಲಿ ಒಟ್ಟು ಐದುಗಳಿರುತ್ತವೆ.