ವಿಶ್ವ ಕ್ರಿಕೆಟ್‌ನ ದಾಖಲೆಗಳ ಸರದಾರ ಎನಿಸಿರುವ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ(Virat Kohli) ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಮತ್ತೊಂದು ದಾಖಲೆ ಬರೆಯುವತ್ತ ಕಣ್ಣಿಟ್ಟಿದ್ದಾರೆ.
ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕಿಂಗ್ ಕೊಹ್ಲಿ, ಪಂದ್ಯಾವಳಿಯಲ್ಲಿ ಲೀಡಿಂಗ್ ರನ್ ಸ್ಕೋರರ್ ಆಗಿ ಮಿಂಚಿದ್ದರು. ಆದರೆ ನಂತರ ನ್ಯೂಜಿ಼ಲೆಂಡ್ ಪ್ರವಾಸದ ವೇಳೆ ವಿಶ್ರಾಂತಿ ಪಡೆದಿದ್ದ ಕೊಹ್ಲಿ, ಇದೀಗ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡುವ ತವಕದಲ್ಲಿದ್ದಾರೆ. ಅಲ್ಲದೇ ಅತಿಥೇಯ ಬಾಂಗ್ಲಾದೇಶ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆಯಲ್ಲಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ ಹೊಂದಿರುವ ವಿರಾಟ್ ಕೊಹ್ಲಿ, ಬಾಂಗ್ಲಾದೇಶದಲ್ಲಿ ಈವರೆಗೂ ಆಡಿರುವ ಏಕದಿನ ಪಂದ್ಯದಲ್ಲಿ 1000 ರನ್ ಪೂರೈಸಲು 30 ರನ್‌ಗಳ ಅಗತ್ಯವಿದೆ. ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 30 ರನ್‌ಗಳಿಸಿದರೆ, ಬಾಂಗ್ಲಾದೇಶದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಕೊಹ್ಲಿ ಮುಡಿಗೇರಲಿದೆ. ಬಾಂಗ್ಲಾದೇಶದಲ್ಲಿ ಈವರೆಗೂ 16 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, 80.33ರ ಸರಾಸರಿ ಹಾಗೂ 100.20 ಸ್ಟ್ರೈಕ್ ರೇಟ್ ಮೂಲಕ 970 ರನ್‌ಗಳಿಸಿದ್ದಾರೆ.
ಇದರ ಜೊತೆಗೆ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರ ರೆಕಾರ್ಡ್ ಬ್ರೇಕ್ ಮಾಡುವತ್ತ ಸಹ ವಿರಾಟ್ ಕಣ್ಣಿಟ್ಟಿದ್ದಾರೆ. ಬಾಂಗ್ಲಾ ನೆಲದಲ್ಲಿ ವಿದೇಶಿ ತಂಡದ ಪರ ಅತಿಹೆಚ್ಚು ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಂಗಕ್ಕಾರ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಮೊದಲ ODIನಲ್ಲಿ 75 ರನ್‌ಗಳಿಸಿದರೆ, ಕುಮಾರ ಸಂಗಕ್ಕಾರ ಅವರ ಹೆಸರಿನಲ್ಲಿರುವ ಈ ದಾಖಲೆ ಕಿಂಗ್ ಕೊಹ್ಲಿ ಅವರದ್ದಾಗಲಿದೆ.