ಅತಿಥೇಯ ಬಾಂಗ್ಲಾದೇಶ ಹಾಗೂ ಪ್ರವಾಸಿ ಅಫ್ಘಾನಿಸ್ತಾನ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ODI ಸರಣಿ ಗೆದ್ದಿರುವ ಬಾಂಗ್ಲಾ, ಟಿ20 ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಸೋಲಿನ ಸೇಡು ತೀರಿಸಿಕೊಳ್ಳಲು ಅಫ್ಘಾನಿಸ್ತಾನ್ ಸಜ್ಜಾಗಿದೆ.
ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಢಾಕಾದಲ್ಲಿ ನಡೆಯಲಿದೆ. ಮೇಲ್ನೋಟಕ್ಕೆ ಎರಡು ತಂಡಗಳು ಸಮಬಲದಿಂದ ಕೂಡಿದ್ದರು, ಚುಟುಕು ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ್ ತನ್ನದೇ ಪ್ರಾಬಲ್ಯ ಸಾಧಿಸಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಬಳಿಕ ಅಫ್ಘಾನಿಸ್ತಾನ್ ತಂಡದ ಹಲವು ಹಿರಿಯ ಆಟಗಾರರನ್ನ ಕೈಬಿಡಲಾಗಿದೆ. ಹೀಗಾಗಿ ಯುವ ಆಟಗಾರರನ್ನು ಹೊಂದಿರುವ ಅಫ್ಘಾನ್ ಪಡೆ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ. ಸ್ಪಿನ್ ತ್ರಿಮೂರ್ತಿಗಳಾದ ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೂ ಮುಜೀಬ್ ಉರ್ ರೆಹಮಾನ್ ಅಫ್ಘಾನ್ ಬೌಲಿಂಗ್ನ ಪ್ರಮುಖ ಶಕ್ತಿಯಾಗಿದ್ದಾರೆ.
ಆದರೆ ಬಾಂಗ್ಲಾದೇಶದ ಪರಿಸ್ಥಿತಿ ವಿಭಿನ್ನವಾಗಿದ್ದು, ಕಳೆದ ಎಂಟು ಟಿ20 ಪಂದ್ಯದಲ್ಲಿ ಸೋಲು ಕಂಡಿರುವ ಬಾಂಗ್ಲಾ ಹುಲಿಗಳು ಗೆಲುವಿನ ಹಾದಿ ಹುಡುಕಾಟದಲ್ಲಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಆಡಿದ್ದ ತಂಡವೇ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಆಡುತ್ತಿದೆ. ಕಳೆದ ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ತಂಡದಿಂದ ಹೊರಗುಳಿದಿದ್ದ ಮುಷ್ಫಿಕರ್ ರಹೀಮ್ ತಂಡಕ್ಕೆ ಮರಳಿದ್ದು, ಬಾಂಗ್ಲಾದ ಬ್ಯಾಟಿಂಗ್ ವಿಭಾಗವನ್ನ ಬಲಿಷ್ಠಗೊಳಿಸಿದೆ. ಆದರೆ ತಮೀಮ್ ಇಕ್ಬಾಲ್ ಅನುಪಸ್ಥಿತಿ ತಂಡಕ್ಕೆ ಕೊಂಚ ಹಿನ್ನಡೆ ಮೂಡಿಸಿದೆ.
ತವರಿನಲ್ಲಿ ಬಾಂಗ್ಲಾದೇಶ್ ತಂಡವೇ ಬಲಿಷ್ಠವಾಗಿದ್ದರು, ಅಂಕಿ ಅಂಶಗಳ ಪ್ರಕಾರ ಟಿ20ಯಲ್ಲಿ ಅಫ್ಘಾನಿಸ್ತಾನ್ ಮೇಲುಗೈ ಹೊಂದಿದೆ. ಬಾಂಗ್ಲಾದೇಶ ವಿರುದ್ಧದ ಕಳೆದ ಆರು ಟಿ20 ಪಂದ್ಯಗಳಲ್ಲಿ ಅಫ್ಘಾನಿಸ್ತಾನ ನಾಲ್ಕು ಪಂದ್ಯವನ್ನು ಗೆದ್ದಿದೆ.