ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಫಲಿತಾಂಶಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಸಂಭ್ರಮದ ಬಗ್ಗೆ ಚರ್ಚೆ ಶುರುವಾಗಿದೆ.
ಬಲಾಬಲದ ವಿಚಾರದಲ್ಲಿ ಟೀಮ್ ಇಂಡಿಯಾಕ್ಕೆ ಶ್ರೀಲಂಕಾ ಸಾಟಿಯಲ್ಲ. ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಷ್ಟು ಸುಲಭದ ವಿಷಯವಲ್ಲ. ಟೀಮ್ ಇಂಡಿಯಾದ ಕಾಂಬಿನೇಷನ್ ಕೂಡ ಬಲಿಷ್ಠವಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪೂಜಾರಾ ಸ್ಥಾನದಲ್ಲಿ ಹನುಮ ವಿಹಾರಿ ಆಡಬಹುದು. 100ನೇ ಟೆಸ್ಟ್ ಸಂಭ್ರಮದಲ್ಲಿರುವ ವಿರಾಟ್ 4ನೇ ಕ್ರಮಾಂಕದಲ್ಲಿದ್ದರೆ, ರಹಾನೆ ಆಡುವ ಜಾಗ ಶ್ರೇಯಸ್ ಪಾಲಾಗಬಹುದು. ರಿಷಬ್ ಪಂತ್ ವಿಕೆಟ್ ಕೀಪರ್. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ನರ್ ಗಳು ಕಂ ಆಲ್ರೌಂಡರ್ಗಳು. ಬುಮ್ರಾ ಮತ್ತು ಮೊಹಮ್ಮದ್ ಶಮಿ ಹೊಸ ಚೆಂಡು ಹಂಚಿಕೊಂಡರೆ, ಉಮೇಶ್ ಯಾದವ್ 3ನೇ ವೇಗಿಯಾಗಿ ತಂಡ ಸೇರಬಹುದು.
ಇನ್ನೊಂದೆಡೆ ಶ್ರೀಲಂಕಾ ತಂಡದ ಕಾಂಬಿನೇಷನ್ ಬಗ್ಗೆ ಹೆಚ್ಚು ಚರ್ಚೆ ಇದೆ. ನಾಯಕ ದಿಮುತ್ಕರುಣರತ್ನೆ ಮತ್ತು ಪಥುನ್ ನಿಸ್ಸಾಂಕ ಆಟ ಆರಂಭಿಸಿದರೆ, ದಿನೇಶ್ ಚಾಂಡಿಮಲ್ ಮತ್ತು ಅನುಭವಿ ಆ್ಯಂಜಲೋ ಮ್ಯಾಥ್ಯೂಸ್ ಟಾಪ್ ಆರ್ಡರ್ನ ಆಧಾರ. ಧನಂಜಯ ಡಿ ಸಿಲ್ವಾ, ಕುಸಾಲ್ ಮೆಂಡಿಸ್ ಮತ್ತು ತಿರಿಮನ್ನೆ ಕೂಡ ಬ್ಯಾಟಿಂಗ್ ಬಲ ಹೆಚ್ಚಿಸಬಹುದು. ಲಸಿತ್ ಎಂಬುಲ್ಡೆನಿಯಾ ಸ್ಪಿನ್ ಬೌಲಿಂಗ್ ಬಗ್ಗೆ ಗಮನವಿದೆ. ಉಳಿದಂತೆ ಕರುಣರತ್ನೆ ಮತ್ತು ಕುಮಾರ ವೇಗದ ಬೌಲಿಂಗ್ನ ಹೊಣೆ ಹೊರಬಹುದು.
ಮೊಹಾಲಿ ಪಿಚ್ ಬಗ್ಗೆ ಗಮನಕೊಟ್ರೆ ಹೆಚ್ಚು ಸ್ವಿಂಗ್ ಆರಂಭದಲ್ಲಿ ಸಿಗಬಹುದು. ಆದರೆ ಬಿಸಿಲು ಹೆಚ್ಚಾದಂತೆ ಸ್ಪಿನ್ನರ್ಗಳ ಆಟವೇ ಫಲಿತಾಂಶ ನಿರ್ಧರಿಸಲಿದೆ. ಹೀಗಾಗಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಲಿದೆ.