ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯಿಂದ ಆಸ್ಟ್ರೇಲಿಯಾದ ಸ್ಪಿನ್ ಕೋಚ್ ಶ್ರೀಧರನ್ ಶ್ರೀರಾಮ್ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಶ್ರೀರಾಮ್ ಆಸ್ಟ್ರೇಲಿಯಾದ ಪಾಕ್ ಪ್ರವಾಸಕ್ಕೆ ಲಭ್ಯರಿಲ್ಲ. ಇದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.
ಕೆಲ ದಿನಗಳ ಹಿಂದೆ ಹೆಡ್ ಕೋಚ್ ಆಗಿದ್ದ ಜಸ್ಟಿನ್ ಲ್ಯಾಂಗರ್ ಆ್ಯಶಷ್ ಸರಣಿಯ ಗೆಲುವಿನ ಬಳಿಕವೂ ರಾಜಿನಾಮೆ ನೀಡಿದ್ದರು. ಈಗ ಶ್ರೀರಾಂ ಕೂಡ ಪಾಕ್ ಪ್ರವಾಸಕ್ಕೆ ಲಭ್ಯರಿಲ್ಲ. ಹೀಗಾಗಿ ಆಸ್ಟ್ರೇಲಿಯಾ ತಂಡ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ಕಳೆದ 6 ವರ್ಷಗಳಿಂದ ಶ್ರೀರಾಮ್ ಆಸ್ಟ್ರೇಲಿಯಾ ತಂಡದ ಸ್ಪಿನ್ ಕೋಚ್ ಆಗಿದ್ದಾರೆ. ಆದರೆ ಇದೀಗ ಸರಣಿಯಿಂದ ಹಿಂದೆ ಸರಿದಿರುವುದರಿಂದ ಆಸ್ಟ್ರೇಲಿಯಾ ಈಗ ಪಾಕಿಸ್ತಾನ ಪ್ರವಾಸಕ್ಕಾಗಿ ಸ್ಪಿನ್ ಬೌಲಿಂಗ್ ಕೋಚ್ ಅನ್ನು ಹುಡುಕುತ್ತಿದ್ದು ನ್ಯೂಜಿಲ್ಯಾಂಡ್ ನ ಮಾಜಿ ನಾಯಕ ಡೇನಿಯಲ್ ವೆಟ್ಟೂರಿ ಹೆಸರು ಮುಂಚೂಣಿಯಲ್ಲಿದೆ.
2013ರಲ್ಲಿ ಆಸ್ಟ್ರೇಲಿಯಾ ತಂಡ ಸ್ಪಿನ್ ಬೌಲಿಂಗ್ ಕೋಚ್ ಇಲ್ಲದೆ ಉಪಖಂಡಕ್ಕೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಭಾರತದಲ್ಲಿ ಆಸ್ಟ್ರೇಲಿಯಾ ಅತ್ಯಂತ ಹೀನಾಯ ಸೋಲು ಕಂಡಿತ್ತು. ಇದೀಗ ಶ್ರೀರಾಮ್ ಸರಣಿಯಿಂದ ಹಿಂದೆ ಸರಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ ತಂದಿಟ್ಟಿದೆ.