ಪ್ರವಾಸಿ ಶ್ರೀಲಂಕಾ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಟಿ20 ಕ್ರಿಕೆಟ್ ಪಂದ್ಯ ಇಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಮುನ್ನಡೆ ಸಾಧಿಸಿರುವ ಕಾಂಗರೂ ಪಡೆ ವೈಟ್ ವಾಶ್ ಲೆಕ್ಕಾಚಾರದಲ್ಲಿದ್ದರೆ. ಸೋಲಿನ ಸುಳಿಗೆ ಸಿಲುಕಿರುವ ಶ್ರೀಲಂಕಾ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಗೆಲುವಿನ ಗುರಿ ತಲುಪುವಲ್ಲಿ ಮುಗ್ಗರಿಸಿರುವ ಶ್ರೀಲಂಕಾ, ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ದಸುನ್ ಸನಕಾ ನೇತೃತ್ವದ ಲಂಕಾ ಪಡೆ, ಸರಣಿಯ ಉಳಿದೆರಡು ಪಂದ್ಯವನ್ನು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಹವಣಿಸುತ್ತಿದೆ.
ಸರಣಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಶ್ರೀಲಂಕಾ ಪ್ರಮುಖವಾಗಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಚೇತರಿಕೆ ಕಾಣಬೇಕಿದೆ. ಲಂಕಾ ಪರ ಪತುಮ್ ನಿಸ್ಸಂಕಾ ಉತ್ತಮ ಫಾರ್ಮ್ನಲ್ಲಿದ್ದು, ಪ್ರಮುಖ ಆಟಗಾರರಾದ ಧನುಷ್ಕಾ ಗುಣತಿಲಕಾ ಹಾಗೂ ಅವಿಷ್ಕಾ ಫರ್ನಾಂಡೋ ಅವರುಗಳಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಇನ್ನೂ 3ನೇ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದಿದ್ದ ಚರಿತ್ ಅಸಲಂಕಾ, ತಮ್ಮ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ಶ್ರೀಲಂಕಾ ತಂಡದ ಸ್ಟಾರ್ ಆಟಗಾರರು ಕೊರೊನಾ ಸೋಂಕಿಗೆ ಗುರಿಯಾಗಿರುವುದು ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿದೆ. ತಂಡದ ಪ್ರಮುಖ ಆಟಗಾರರಾದ ವನಿಂದು ಹಸರಂಗ, ಬಿನುರಾ ಫರ್ನಾಂಡೋ ಹಾಗೂ ಕುಸಲ್ ಮೆಂಡಿಸ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ನಡುವೆ ಕುಸಲ್ ಮೆಂಡಿಸ್ ಸೋಂಕಿನಿಂದ ಗುಣಮುಖರಾಗಿ 3ನೇ ಪಂದ್ಯದಲ್ಲಿ ಕಣಕ್ಕಿಳಿದರು. ಆದರೆ 3ನೇ ಪಂದ್ಯಕ್ಕೂ ಮುನ್ನ ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ತಂಡಕ್ಕೆ ದೊಡ್ಡ ಹೊಡೆತ ನೀಡಿತು.
ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಉತ್ತಮ ಲಯದಲ್ಲಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಸಮತೋಲನದಿಂದ ಕೂಡಿದೆ. ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಹೇಜ಼ಲ್ವುಡ್, ಕೇನ್ ರಿಚರ್ಡ್ಸನ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ತಂಡದ ಪ್ರಮುಖ ಬೌಲರ್ ಮಿಚೆಲ್ ಸ್ಟಾರ್ಕ್ ಸರಣಿಯಲ್ಲಿ ನಿರೀಕ್ಷಿತ ಸಕ್ಸಸ್ ಕಂಡಿಲ್ಲ. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಇತರೆ ಬ್ಯಾಟ್ಸಮನ್ಗಳು ಫಾರ್ಮ್ ಕಂಡುಕೊಂಡಿದ್ದಾರೆ.
ಎರಡು ತಂಡಗಳ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ 20 ರನ್ಗಳಿಂದ ಗೆದ್ದರೆ, ಎರಡನೇ ಪಂದ್ಯವನ್ನು ಸೂಪರ್ ಓವರ್ನಲ್ಲಿ ಹಾಗೂ 3ನೇ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆಲುವು ಕಂಡಿದೆ. ಸರಣಿಯ 5ನೇ ಹಾಗೂ ಕೊನೆಯ ಪಂದ್ಯ ಫೆ.20ರಂದು ನಡೆಯಲಿದೆ.