ನಾಯಕ ಆರನ್ ಫಿಂಚ್(55) ಅರ್ಧಶತಕ ಹಾಗೂ ನಾಥನ್ ಎಲ್ಲಿಸ್(4/28) ಅದ್ಭುತ ಬೌಲಿಂಗ್ ನೆರವಿನಿಂದ ಪಾಕಿಸ್ತಾನ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್ಗಳ ಗೆಲುವು ಸಾಧಿಸಿದೆ.
ಲಾಹೋರ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 162/8 ರನ್ಗಳಿಸಿತು. ಈ ಗುರಿ ಬೆನ್ನತ್ತಿದ ಆಸೀಸ್ ಪಡೆ 19.1 ಓವರ್ಗಳಲ್ಲಿ 163/7 ರನ್ಗಳಿಸಿ ಗೆಲುವು ಸಾಧಿಸಿತು. ಆ ಮೂಲಕ ಉಭಯ ತಂಡಗಳ ನಡುವಿನ ಏಕೈಕ ಟಿ20 ಪಂದ್ಯವನ್ನು ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಪಾಕಿಸ್ತಾನ್ ತಂಡದ ಟಾರ್ಗೆಟ್ ಎದುರಿಸಿದ ಆಸ್ಟ್ರೇಲಿಯಾಕ್ಕೆ ಟ್ರಾವಿಸ್ ಹೆಡ್(26) ಹಾಗೂ ಫಿಂಚ್(55) ಮೊದಲ ವಿಕೆಟ್ಗೆ 40 ರನ್ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಜೋಶ್ ಇಂಗ್ಲಿಸ್(24) ಉಪಯುಕ್ತ ರನ್ಗಳಿಸಿದರು. ನಂತರ ಬಂದ ಮಾರ್ನಸ್ ಲಬುಸ್ಚೆಗ್ನೆ(2), ಕೆಮರೂನ್ ಗ್ರೀನ್(2) ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ಫಿಂಚ್ 55 ರನ್(45 ಬಾಲ್, 6 ಬೌಂಡರಿ) ತಂಡಕ್ಕೆ ನೆರವಾದರು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಸ್ಟಾಯ್ನಿಸ್(23) ಹಾಗೂ ಬೆನ್ ಮೆಕ್ಡರ್ಮಾಟ್(22*) ತಂಡದ ಗೆಲುವಿನಲ್ಲಿ ಮಿಂಚಿದರು. ಪಾಕ್ ಪರ ಅಫ್ರಿದಿ, ಖಾದಿರ್ ಹಾಗೂ ವಾಸಿಂ ತಲಾ 2 ವಿಕೆಟ್ ಪಡೆದರು.
ಅಬ್ಬರಿಸಿದ ಬಾಬರ್ ಆಜ಼ಂ:
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬಾಬರ್ ಆಜ಼ಂ ಟಿ20 ಪಂದ್ಯದಲ್ಲೂ ಮಿಂಚಿದರು. ಆರಂಭಿಕನಾಗಿ ಕಣಕ್ಕಿಳಿದ ಪಾಕ್ ತಂಡದ ನಾಯಕನ ಜವಾಬ್ದಾರಿಯ ಆಟ ತಂಡಕ್ಕೆ ಆಸರೆಯಾಯಿತು. ತಂಡದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಅಬ್ಬರಿಸಿದ ಬಾಬರ್ ಆಜ಼ಂ 66 ರನ್ (46 ಬಾಲ್, 6 ಬೌಂಡರಿ, 2 ಸಿಕ್ಸ್) ಮೂಲಕ ತಂಡದ ಮೊತ್ತ ಹೆಚ್ಚಿಸಿದರು.
ಪಾಕ್ ಪೈಪೋಟಿ ಮೊತ್ತ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕರಾಗಿ ಬಂದ ಮೊಹಮ್ಮದ್ ರಿಜ್ವಾನ್(23) ಹಾಗೂ ಬಾಬರ್ ಆಜ಼ಂ(66) ಮೊದಲ ವಿಕೆಟ್ಗೆ 67 ರನ್ಗಳ ಉತ್ತಮ ಆರಂಭ ನೀಡಿದರು. ಆದರೆ ಫಖರ್ ಜಮಾನ್(0), ಇಫ್ತಿಕಾರ್ ಅಹ್ಮೆದ್(13) ತಂಡಕ್ಕೆ ಆಸರೆಯಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ಖುಷ್ದಿಲ್ ಶಾ(24) ಮತ್ತು ಕೊನೆಯಲ್ಲಿ ಬಂದ ಉಸ್ಮಾನ್ ಖಾದಿರ್(18) ಉಪಯುಕ್ತ ಕಾಣಿಕೆ ನೀಡಿದರು. ಉಳಿದಂತೆ ಅಸೀಫ್ ಅಲಿ(3), ಹಸನ್ ಅಲಿ(11), ಶಹೀನ್ ಅಫ್ರಿದಿ(0) ಹಾಗೂ ಮೊಹಮ್ಮದ್ ವಾಸಿಂ(2) ಯಾವುದೇ ಕಮಾಲ್ ಮಾಡಲಿಲ್ಲ. ಆಸೀಸ್ ಪರ ನಾಥನ್ ಎಲಿಸ್(4/28) ಪರಿಣಾಮಕಾರಿ ಬೌಲಿಂಗ್ ಮೂಲಕ ಪಾಕ್ ಆಟಗಾರರಿಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕೆಮರೂನ್ ಗ್ರೀನ್(2/16) ವಿಕೆಟ್ ಪಡೆದರೆ. ಸೆನ್ ಅಬ್ಬೋಟ್ ಮತ್ತು ಜ್ಹಂಪ ತಲಾ 1 ವಿಕೆಟ್ ಪಡೆದರು.