ಅಸಾಧ್ಯ ಎಂಬ ಪದಕ್ಕೆ ಕ್ರಿಕೆಟ್ನಲ್ಲಿ ಅರ್ಥವೇ ಇಲ್ಲ ಎಂಬುದಕ್ಕೆ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ (Aus VS Zim) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಆಟದ ಎಲ್ಲಾ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾಕ್ಕೆ (Australia) ಜಿಂಬಾಬ್ವೆ (Zimababwe) ಸಾಟಿಯೇ ಅಲ್ಲ. ಆದರೆ ಫಲಿತಾಂಶ ಮಾತ್ರ ಉಲ್ಟಾ. 3 ಪಂದ್ಯಗಳ ಏಕದಿನ ಸರಣಿಯ (ODI Series) ಕೊನೆಯ ಪಂದ್ಯ ಜಿಂಬಾಬ್ವೆ (Zim) ಪಾಲಾಗಿದೆ. ಆಸ್ಟ್ರೇಲಿಯಾ (Aus) ಸರಣಿ ಗೆದ್ದರೂ ತವರಿನಲ್ಲಿ ಕ್ಲೀನ್ಸ್ವೀಪ್ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ಟೌನ್ಸ್ವಿಲ್ಲೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು ಆಸ್ಟ್ರೇಲಿಯಾ. ಪಾಕೆಟ್ ಡೈನಾಮೇಟ್ ಡೇವಿಡ್ ವಾರ್ನರ್ ಅಬ್ಬರಿಸುತ್ತಾ ಸಾಗಿದರೂ ಮತ್ತೊಂದೆಡೆ ವಿಕೆಟ್ಗಳು ತರಗೆಲೆಗಳಂತೆ ಉದುರಿದವು. ನಾಯಕ ಆರೋನ್ ಫಿಂಚ್ 5 ರನ್ಗೆ ಔಟಾದರೆ, ಸ್ಟೀವನ್ ಸ್ಮಿತ್ 1, ಅಲೆಕ್ಸ್ ಕ್ಯಾರಿ 4, ಮಾರ್ಕ್ಸ್ ಸ್ಟಾಯ್ನಿಸ್ 3 ಮತ್ತು ಕೆಮರೂನ್ ಗ್ರೀನ್ 3 ರನ್ಗಳಿಸಿ ಪವೆಲಿಯನ್ ಸೇರಿಕೊಂಡಿದ್ದರು. ಆದರೆ ಡೇವಿಡ್ ವಾರ್ನರ್ ಏಕಾಂಗಿಯಾಗಿ ಅಬ್ಬರಿಸಿರು. ಗ್ಲೆನ್ ಮ್ಯಾಕ್ಸ್ವೆಲ್ 19 ರನ್ಗಳಿಸಿ ಕೊಂಚ ಸಾಥ್ ನೀಡಿದರು.
ಈ ಮಧ್ಯೆ ಲೆಗ್ಸ್ಪಿನ್ನರ್ ರ್ಯಾನ್ ಬರ್ಲ್ ಮ್ಯಾಜಿಕ್ ಮಾಡಿದರು. ಆಸ್ಟನ್ ಅಗರ್ ಖಾತೆ ತೆರೆಯದೆ ಔಟಾದರೆ, ಮಿಚೆಲ್ ಸ್ಟಾರ್ಕ್ 2 ರನ್ಗಳಿಸಿ ಪವೆಲಿಯನ್ ಸೇರಿಕೊಂಡರು. ಈ ಮಧ್ಯೆ 96 ಎಸೆತಗಳಲ್ಲಿ 94 ರನ್ಗಳಿಸಿದ್ದ ವಾರ್ನರ್ ಕೂಡ ಔಟಾಗಿ ಶತಕ ತಪ್ಪಿಸಿಕೊಂಡರು. ಆಸ್ಟ್ರೇಲಿಯಾ 31 ಓವರುಗಳಲ್ಲಿ 141 ರನ್ಗಳಿಗೆ ಆಲೌಟ್ ಆಗಿತ್ತು. ಜಿಂಬಾಬ್ವೆಯ ಬರ್ಲ್ 5ವಿಕೆಟ್ ಪಡೆದು ಮಿಂಚಿದರು.
ಟಾರ್ಗೆಟ್ ಸುಲಭವಾಗಿದ್ದರೂ ಜಿಂಬಾಬ್ವೆಗೆ ಚೇಸ್ ಮಾಡಲು ಈಸಿಯಾಗಲಿಲ್ಲ. ಜೋಶ್ ಹ್ಯಾಜಲ್ವುಡ್ ಕಿತಾನೋ (19), ಮದರೆವಿರ (2) ಮತ್ತು ಸೀನ್ ವಿಲಿಯಮ್ಸ್ (0) ವಿಕೆಟ್ ಪಡೆದರು. ಮುರುಮಾನಿ (35)ರನ್ಗಳಿಸಿ ಗ್ರೀನ್ಗೆ ವಿಕೆಟ್ ಒಪ್ಪಿಸಿದರೆ, ಸಿಕಂದರ್ ರಾಜಾ ಮಾರ್ಕಸ್ ಸ್ಟಾಯ್ನಿಸ್ ಎಸೆತದಲ್ಲಿ ಔಟಾದರು.
ನಾಯಕ ರೆಗಿಸ್ ಚಕಬ್ವ, ಅಜೇಯ 37 ರನ್ಗಳಿಸಿ ಗೆಲುವಿನ ರೂವಾರಿಯಾದರು. ಆದರೆ ಟೋನಿ ಮುನ್ಯಾಗೊ (17), ಬರ್ಲ್ (11) ಗಳಿಸಿದ ರನ್ಗಳು ನಿರ್ಣಾಯಕವಾದರು. ಜಿಂಬಾಬ್ವೆ 39 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ಏಕದಿನ ಸರಣಿ ಗೆದ್ದರೂ, ಜಿಂಬಾಬ್ವೆ ವಿರುದ್ಧ ಕೊನೆಯ ಪಂದ್ಯ ಸೋತ ಅವಮಾನ ಅನುಭವಿಸಿತು.