ಗ್ಲೆನ್ ಮ್ಯಾಕ್ಸ್ವೆಲ್(48) ಹಾಗೂ ಜೋಶ್ ಇಂಗ್ಲಿಸ್(40) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೆಲ್ಬೋರ್ನ್ನ ಎಂಸಿಜಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಬ್ಯಾಟ್ಸಮನ್ಗಳ ನೀರಸ ಪ್ರದರ್ಶನದಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಕಾಂಗರೂ ಪಡೆ, 18.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 143 ರನ್ಗಳಿಸಿ ಗೆಲುವಿನ ನಗೆಬೀರಿತು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕ ಆಟಗಾರ ಪತುಮ್ ನಿಸ್ಸಂಕ(46) ಹೊರತುಪಡಿಸಿದರೆ, ಕುಸಾಲ್ ಮೆಂಡಿಸ್(27), ಅಸಲಂಕಾ(22) ರನ್ಗಳಿಸಿದರು. ಉಳಿದಂತೆ ನಾಯಕ ಸನಕಾ(1) ಸೇರಿದಂತೆ ಬೇರೆ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಪರ ಜಾಯ್ ರಿಚರ್ಡ್ಸನ್ ಹಾಗೂ ಕೇನ್ ರಿಚರ್ಡ್ಸನ್ ತಲಾ 2 ವಿಕೆಟ್ ಪಡೆದರೆ. ಅಗರ್ ಹಾಗೂ ಜ಼ಂಪ ತಲಾ 1 ವಿಕೆಟ್ ಪಡೆದುಕೊಂಡರು.
ಶ್ರೀಲಂಕಾ ನೀಡಿದ ಸುಲಭದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲಿಲ್ಲ. ಆಸೀಸ್ ಪರ ಇನ್ನಿಂಗ್ಸ್ ಆರಂಭಿಸಿದ ಆಷ್ಟನ್ ಅಗರ್(26), ಬೆನ್ ಮೆಕ್ಡರ್ಮಾಟ್(9) ಹಾಗೂ ನಾಯಕ ಆರನ್ ಫಿಂಚ್(2) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಪರಿಣಾಮ ಆಸ್ಟ್ರೇಲಿಯಾ 49 ರನ್ಗಳಿಗೆ ಆರಂಭಿಕ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ 4ನೇ ವಿಕೆಟ್ಗೆ ಜೊತೆಯಾದ ಮ್ಯಾಕ್ಸ್ವೆಲ್ ಹಾಗೂ ಜೋಶ್ ಇಂಗ್ಲಿಸ್, 71 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲಿಸ್, ಕೇವಲ 20 ಬಾಲ್ಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 40 ರನ್ಗಳಿಸಿ ಮಿಂಚಿದರೆ. ಮ್ಯಾಕ್ಸ್ವೆಲ್ (ಅಜೇಯ 48) ರನ್ಗಳಿಸಿ ತಂಡವನ್ನು ಗೆಲುವಿನ ದಡಸೇರಿಸಿದರು. ಆ ಮೂಲಕ ಕಾಂಗರೂ ಪಡೆ ಸರಣಿಯಲ್ಲಿ ಸತತ 4ನೇ ಜಯ ಸಾಧಿಸಿತು. ಶ್ರೀಲಂಕಾ ಪರ ಲಹಿರು ಕುಮಾರ 2, ತೀಕ್ಷಣ ಮತ್ತು ಚಮೀರಾ 1 ವಿಕೆಟ್ ಪಡೆದರು.