ಐಸಿಸಿ ಏಕದಿನ ಮಹಿಳಾ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಅತಿಥೇಯ ನ್ಯೂಜಿ಼ಲೆಂಡ್ ವಿರುದ್ಧ 141 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯರು ಪರಾಕ್ರಮ ತೋರಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅಬ್ಬರಿಸಿದ ಆಸೀಸ್ ಆಟಗಾರ್ತಿಯರು, ನ್ಯೂಜಿ಼ಲೆಂಡ್ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವನಿತೆಯರ ತಂಡ ಒಟ್ಟು 6 ಅಂಕಗಳಿಂದ ಅಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವನಿತೆಯರು ಎಲ್ಲೆಸ್ ಪೆರ್ರಿ(68) ಹಾಗೂ ತಹ್ಲಿಯಾ ಮೆಕ್ಗ್ರಾತ್(57) ಅವರ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 269 ರನ್ಗಳಿಸಿತು. ಈ ಸವಾಲು ಬೆನ್ನತ್ತಿದ ನ್ಯೂಜಿ಼ಲೆಂಡ್ 30.2 ಓವರ್ಗಳಲ್ಲಿ 128 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ನ್ಯೂಜಿ಼ಲೆಂಡ್ ಪ್ರಸಕ್ತ ಟೂರ್ನಿಯಲ್ಲಿ ತನ್ನ 2ನೇ ಸೋಲನುಭವಿಸಿತು.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 56 ರನ್ಗಳಿಗೆ ಆರಂಭಿಕ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಬಂದ ಮಧ್ಯಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯುತ ಆಟವಾಡಿದರು. ಪ್ರಮುಖವಾಗಿ ಎಲ್ಲೆಸ್ ಪೆರ್ರಿ(68) ಹಾಗೂ ತಹ್ಲಿಯಾ ಮೆಕ್ಗ್ರಾತ್(57) ಜೋಡಿ 5ನೇ ವಿಕೆಟ್ಗೆ 101 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಂತರ ಬಂದ ಆಶ್ಲೀಗ್ ಗಾರ್ಡ್ನರ್ ಕೇವಲ 18 ಬಾಲ್ಗಳಲ್ಲಿ 48* ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಆಸೀಸ್ ನೀಡಿದ ಕಠಿಣ ಸವಾಲು ಬೆನ್ನತ್ತಿದ ನ್ಯೂಜಿ಼ಲೆಂಡ್, ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಗ್ರ ಕ್ರಮಾಂಕದ ಆಟಗಾರ್ತಿಯರಾದ ಸೂಜಿ಼ ಬೇಟ್ಸ್(16), ಸೋಫಿ ಡಿವೈನ್(6) ಹಾಗೂ ಅಮೆಲಿಯಾ ಕೆರ್(1) ಬಹುಬೇಗನೆ ಪೆವಿಲಿಯನ್ ಸೇರಿದರು. ಆದರೆ ನಂತರ ಕಣಕ್ಕಿಳಿದ ಆಮಿ ಸೆಟರ್ಥ್ವೈಟ್(44) ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಬರಲಿಲ್ಲ. ಪರಿಣಾಮ ನ್ಯೂಜಿ಼ಲೆಂಡ್ 128 ರನ್ಗಳಿಕೆ ಸರ್ವಪತನ ಕಂಡಿತು. ಆಸೀಸ್ ಪರ ಬ್ರೌನ್ 3 ವಿಕೆಟ್ ಪಡೆದರೆ, ವೆಲ್ಲಿಂಗ್ಟನ್ ಹಾಗೂ ಗಾರ್ಡ್ನರ್ ತಲಾ 2 ವಿಕೆಟ್ ಕಬಳಿಸಿದರು.