ಕಡುಬದ್ಧ ವೈರಿ ಪಾಕಿಸ್ತಾನ (Pakistan) ತಂಡವನ್ನು ಸೋಲಿಸಿದ ಬಳಿಕ ಟೀಮ್ ಇಂಡಿಯಾ (Team India) ಹೊಸ ಹುಮ್ಮಸ್ಸಿನಲ್ಲಿದೆ. ಎ ಬಣದ ಕೊನೆಯ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಶಿಶು ಹಾಂಕಾಂಗ್ (Honkong) ತಂಡವನ್ನು ಎದುರಿಸಲು ಸಜ್ಜಾಗಿದೆ. ಗಣೇಶ ಹಬ್ಬದ ದಿನವೇ ಈ ಪಂದ್ಯ ನಡೆಯುತ್ತಿದೆ. ಭಾರತದ (India) ಶಕ್ತಿಗೆ ಹಾಂಕಾಂಗ್ ಎಲ್ಲೂ ಮ್ಯಾಚ್ ಆಗುವುದಿಲ್ಲ. ಹೀಗಾಗಿ ಭಾರತ (Ind) ಸುಲಭ ಹಾಗೂ ದೊಡ್ಡ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ.
ದುಬೈನ ಶೇಖ್ ಝಹೀದ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಾಕ್ ವಿರುದ್ಧ ಆಡಿದ ಪಂದ್ಯದಿಂದ ಈ ಪಂದ್ಯಕ್ಕೆ ಟೀಮ್ ಇಂಡಿಯಾ ಸಣ್ಣ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೆ.ಎಲ್. ರಾಹುಲ್ ಜಾಗದಲ್ಲಿ ರಿಷಬ್ ಪಂತ್ರನ್ನು ಆಟಕ್ಕಿಳಿಸಬಹುದು. ಅಥವಾ ಆವೇಶ್ ಖಾನ್ ಬದಲು ರಿಷಬ್ ಆಡಬಹುದು. ಉಳಿದಂತೆ ಹೆಚ್ಚಿನ ಬದಾಲವಣೆ ಅಸಾಧ್ಯ. ರೋಹಿತ್ ಶರ್ಮಾ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಟ್ರಂಪ್ ಕಾರ್ಡ್ಗಳು. ಜಡೇಜಾ ಮತ್ತು ಹಾರ್ದಿಕ್ ಆಲ್ರೌಂಡರ್ಗಳು. ಭುವನೇಶ್ವರ್ ಮತ್ತುಅರ್ಶದೀಪ್ ಹೊಸ ಚೆಂಡು ಹಂಚಿಕೊಳ್ಳಬಹುದು. ಯಜುವೇಂದ್ರ ಚಹಲ್ ಸ್ಪೆಷಲಿಸ್ಟ್ ಸ್ಪಿನ್ನರ್. ಆಫ್ ಸ್ಪಿನ್ನರ್ ಬೇಕು ಅಂದರೆ ಅಶ್ವಿನ್ ಆವೇಶ್ ಖಾನ್ ಬದಲಿಗೆ ಆಡಬಹುದು. ಆಗ ಮತ್ತೆ ರಾಹುಲ್ ಮತ್ತು ಪಂತ್ ನಡುವೆ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.
ಹಾಂಕಾಂಗ್ ತಂಡ ಅರ್ಹತಾ ಸುತ್ತಿನಲ್ಲಿ ಅದ್ಭುತ ಆಟವನ್ನು ಆಡಿದೆ. ಕುವೈಟ್, ಯುಎಇ ಹಾಗೂ ಒಮನ್ ವಿರುದ್ಧ ಗೆದ್ದು ಈ ಹಂತ ಪ್ರವೇಶಿಸಿದೆ. ಹೀಗಾಗಿ ಹಾಂಕಾಂಗ್ (Hkg) ಏನೇ ಮಾಡಿದರೂ ಅದು ಸಾಧನೆಯೇ. ಎಹ್ಸನ್ ಖಾನ್, ನಿಝಾಕತ್ ಖಾನ್, ಕಿಂಚಿತ್ ಶಾ, ಬಾಬರ್ ಹಯಾತ್ ಸ್ಟಾರ್ ಬ್ಯಾಟರ್ಗಳು. ಆಯುಷ್ ಶುಕ್ಲಾ, ಮೊಹಮ್ಮದ್ ಘಝನ್ಫರ್ ಪರಿಣಾಮಕಾರಿ ಬೌಲರ್ಗಳು. ಟೀಮ್ ಇಂಡಿಯಾಕ್ಕೆ ಹಾಂಕಾಂಗ್ ಹೊಸ ಎದುರಾಳಿ. ಹೀಗಾಗಿ ನೋಡಿಕೊಂಡು ಆಡಬೇಕಾದ ಅನಿವಾರ್ಯತೆ ಇದೆ.
ದುಬೈ ಪಿಚ್ ನಿಧಾನಗತಿಯಿಂದ ಕೂಡಿದೆ. ಹೀಗಾಗಿ ಬೌಲರ್ಗಳಿಗೆ ಕೊಂಚ ಎಡ್ವಾಂಟೇಜ್ ಹೆಚ್ಚಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಇಬ್ಬನಿ ಕಾಟವೂ ಹೆಚ್ಚಾಗುವುದರಿಂದ ಟಾಸ್ ಮೇಲೆ ಎರಡೂ ತಂಡಗಳ ನಾಯಕರ ಕಣ್ಣಿದೆ.