Asia Cup T20 – ಆಯೋಜನೆ ನಮ್ಮಿಂದ ಸಾಧ್ಯವಿಲ್ಲ – ಶ್ರೀಲಂಕಾ ಕ್ರಿಕೆಟ್ ಮಂಡಳಿ..!

ಸದ್ಯ ಪರಿಸ್ಥಿತಿಯಲ್ಲಿ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯನ್ನು ಆಯೋಜನೆ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಅಶಾಂತಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಏಷ್ಯಾಕಪ್ ಆತಿಥ್ಯ ವಹಿಸಲು ಆಗುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಸ್ಪಷ್ಟಪಡಿಸಿದೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಿತ್ತು. ಈ ನಡುವೆ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ದ ದ್ವೀಪಕ್ಷಿಯ ಸರಣಿಯನ್ನು ಆಯೋಜನೆ ಮಾಡಿದೆ. ಆದ್ರೆ ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿದಿದೆ.
ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅತಂತ್ರ. ಜೊತೆಗೆ ವಿದೇಶಿ ವಿನಿಮಯಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಆರು ರಾಷ್ಟ್ರಗಳು ಭಾಗವಹಿಸುವ ಟೂರ್ನಿಯನ್ನು ಆಯೋಜನೆ ಮಾಡುವ ಪರಿಸ್ಥಿತಿಯಲ್ಲಿ ನಾವು ಇಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ತಿಳಿಸಿದೆ.
ಇನ್ನು ಏಷ್ಯಾಕಪ್ ಟೂರ್ನಿಯನ್ನು ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸದ್ಯದಲ್ಲೇ ನಿರ್ಧಾರ ಮಾಡಲಿದೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿದ್ದಾರೆ.
ಈ ನಡುವೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಯುಎಇನಲ್ಲಿ ಆತಿಥ್ಯ ನಡೆಸಲು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿತ್ತು. ಆದ್ರೆ ಅದು ಇನ್ನೂ ಅಂತಿಮಗೊಂಡಿಲ್ಲ.

ಇನ್ನು ಭಾರತ ಆತಿಥ್ಯ ವಹಿಸುವ ಸಾಧ್ಯತೆಯೂ ಇದೆ. ಆದ್ರೆ ಪಾಕ್ ತಂಡ ಆಡುತ್ತಿರುವುದರಿಂದ ವಿಸಾ ಸಮಸ್ಯೆ ಎದುರಾಗಬಹುದು. ಭಾರತ ಮತ್ತು ಪಾಕ್ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಇಂಡೋ ಪಾಕ್ ಸರಣಿ ಕೂಡ ನಡೆಯುತ್ತಿಲ್ಲ.
ಒಟ್ಟಿನಲ್ಲಿ ಆಗಸ್ಟ್ -ಸೆಪ್ಟಂಬರ್ ನಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆ. ನಂತರ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ.
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳು ನೇರ ಅರ್ಹತೆಯನ್ನು ಪಡೆದುಕೊಂಡಿವೆ. ಒಂದು ತಂಡ ಅರ್ಹತಾ ಸುತ್ತಿನಲ್ಲಿ ನಿರ್ಧಾರವಾಗಲಿದೆ.