US Open Tennis – ನೊವಾಕ್ ಜಾಕೊವಿಕ್ ಗೆ ಮುಳುವಾದ ಕೋವಿಡ್ ಲಸಿಕೆ..?

ವಿಂಬಲ್ಡನ್ ಚಾಂಪಿಯನ್ ಸರ್ಬಿಯಾದ ನೊವಾನ್ ಜಾಕೊವಿಕ್ ಅವರು ಪ್ರತಿಷ್ಠಿತ 2022ರ ಯುಎಸ್ ಓಪನ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಯುಎಸ್ ಓಪನ್ ಟೂರ್ನಿಯಲ್ಲಿ ಆಡುವ ಆಟಗಾರರ ಪಟ್ಟಿಯಲ್ಲಿ ನೊವಾಕ್ ಜಾಕೊವಿಕ್ ಅವರ ಹೆಸರಿದೆ. ಆದ್ರೆ ಕೋವಿಡ್ ಲಸಿಕೆ ವಿಚಾರದಲ್ಲಿ ಜಾಕೊವಿಕ್ ಅವರಿಗೆ ಅವಕಾಶ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಯುಎಸ್ ಸರ್ಕಾರದ ಕಟ್ಟು ನಿಟ್ಟಿನ ಆದೇಶವನ್ನು ಯುಎಸ್ ಓಪನ್ ಆಯೋಜಕರು ಪಾಲಿಸಲೇಬೇಕು. ಹೀಗಾಗಿ ಜಾಕೊವಿಕ್ ಅವರು ಈ ಬಾರಿಯ ಯುಎಸ್ ಓಪನ್ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳಿಲ್ಲ.
ಜಾಕೊವಿಕ್ ಅವರು ಇನ್ನೂ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ. ಯುಎಸ್ ಓಪನ್ ಬಿಟ್ಟು ಇನ್ನುಳಿದ ಟೂರ್ನಿಗಳಲ್ಲಿ ಆಡಲು ಜಾಕೊವಿಕ್ ಅವರಿಗೆ ಅವಕಾಶ ನೀಡಲಾಗಿದೆ. ಆದ್ರೆ ಯುಎಸ್ ಸರ್ಕಾರ ಮಾತ್ರ ಅನುಮತಿ ನೀಡಿಲ್ಲ. ಕಳೆದ ಬಾರಿಯೂ ಜಾಕೊವಿಕ್ ಅವರು ಯುಎಸ್ ಓಪನ್ ಟೂರ್ನಿಯಲ್ಲಿ ಆಡಿರಲಿಲ್ಲ.

2022ರ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ಜಾಕೊವಿಕ್ ಅವರು ತಮ್ಮ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆಯನ್ನು 21ಕ್ಕೇರಿಸಿಕೊಂಡಿದ್ದರು. ಸ್ಪೇನ್ ನ ರಫೆಲ್ ನಡಾಲ್ ಅವರು 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡು ಅಗ್ರ ಸ್ಥಾನದಲ್ಲಿದ್ದಾರೆ. ಹೀಗಾಗಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಜಾಕೊವಿಕ್ ಅವರು ಯುಎಸ್ ಓಪನ್ ಗೆದ್ದು ರಫೆಲ್ ನಡಾಲ್ ಸಾಧನೆಯನ್ನು ಸಮಬಲಗೊಳಿಸುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ.
ಯುಎಸ್ ಓಪನ್ ಟೂರ್ನಿ ಆಗಸ್ಟ್ 29ರಿಂದ ಸೆಪ್ಟಂಬರ್ 11ರವರೆಗೆ ನಡೆಯಲಿದೆ. ಇದು ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಾಗಿದೆ. ಇನ್ನು 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಯುಎಸ್ ಓಪನ್ ಟೂರ್ನಿಯಲ್ಲಿ ಆಡುವುದು ಅನುಮಾನವಾಗಿದೆ.

ಇನ್ನೊಂದೆಡೆ ಅಮೆರಿಕಾದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಯುಎಸ್ ಓಪನ್ ಟೂರ್ನಿಯಲ್ಲಿ ಆಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲಲು ವಿಫಲರಾಗುತ್ತಿರುವ ಸೆರೆನಾ ಈಗಾಗಲೇ 23 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದೀಗ ಒಂದು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು ಮಾರ್ಗರೇಟ್ ಕೋರ್ಟ್ ಅವರ ದಾಖಲೆಯನ್ನು ಸಮಗೊಳಿಸಲು ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಆದ್ರೆ ಅದಕ್ಕೆ ಕಾಲ ಇನ್ನೂ ಕೂಡ ಕೂಡಿ ಬಂದಿಲ್ಲ.