Asia Cup – ಅಂದು ಸಚಿನ್..! ಇಂದು ವಿರಾಟ್… ಒಲಿದು ಬಂತು ಶತಕದಾಟ..!
ಕೊನೆಗೂ ಕಿಂಗ್ ಕೊಹ್ಲಿ ಸೆಂಚೂರಿಯ ಸಂಭ್ರಮವನ್ನು ನಗು ನಗುತ್ತಲೇ ಆಚರಿಸಿಕೊಂಡರು. ಮೂರು ವರ್ಷಗಳ ಬಳಿಕ ಶತಕದ ಸಂಭ್ರಮವನ್ನು ಪರವಶಮಾಡಿಕೊಂಡ್ರು. ಶತಕದ ಕ್ಷಣವನ್ನು ಹೇಗೆ ಆನಂದಿಸಬೇಕು ಎಂಬುದು ಸ್ವತಃ ವಿರಾಟ್ ಕೊಹ್ಲಿಗೂ ಗೊತ್ತಾಗಲಿಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿಯವರು ಶತಕವನ್ನೆ ಮರೆತುಬಿಟ್ಟಿದ್ದರು. ಅಫಘನಿಸ್ತಾನ ವಿರುದ್ಧ ಶತಕ ದಾಖಲಿಸುತ್ತೇನೆ ಅಂತನೂ ಅಂದುಕೊಂಡಿರಲಿಲ್ಲ. ಆದ್ರೆ ನೈಜ ಆಟವನ್ನಾಡುತ್ತಲೇ ಕೆಲವೊಂದು ಜೀವದಾನವನ್ನು ಪಡೆದ ವಿರಾಟ್ ತನ್ನ ವಿರಾಟ ರೂಪವನ್ನೇ ಪ್ರದರ್ಶಿಸಿದ್ರು. ನೋಡ ನೋಡುತ್ತಲೇ ಶತಕ ದಾಖಲಿಸಿದ್ದ ಕೊಹ್ಲಿ ಮುಖದಲ್ಲಿ ಸಾರ್ಥಕತೆಯ ಭಾವನೆ ಮೂಡಿತ್ತು.
ಅಂದ ಹಾಗೇ ವಿರಾಟ್ ಕೊಹ್ಲಿಯವರ ಈ ಶತಕದಿಂದ ಟೀಮ್ ಇಂಡಿಯಾ ಏಷ್ಯಾಕಪ್ ನಿಂದ ಹೊರಬಿದ್ದಿರುವ ಸುದ್ದಿ ಕಸದ ಬುಟ್ಟಿ ಸೇರಿಕೊಂಡಿತ್ತು. ಏಷ್ಯಾಕಪ್ ನಿಂದ ಹೊರಬಿದ್ರೂ ಪರವಾಗಿಲ್ಲ. ಕೊಹ್ಲಿ ಫಾರ್ಮ್‍ಗೆ ಬಂದಿರುವುದು, ಶತಕ ದಾಖಲಿಸಿರುವುದು ದೊಡ್ಡ ಸುದ್ದಿಯಾಗಿದೆ. ಏಷ್ಯಾಕಪ್ ನಲ್ಲಿ ಯಾರು ಕೆಟ್ಟದಾಗಿ ಆಡಲಿ, ಬಿಡಲಿ, ಕಿಂಗ್ ಕೊಹ್ಲಿ ಕಮ್ ಬ್ಯಾಕ್ ಆಗಿರೋದು ಟೀಮ್ ಇಂಡಿಯಾಗೆ ಹೊಸ ಚೈತನ್ಯವನ್ನು ತುಂಬಿದೆ.
ವಿಶೇಷತೆ ಮತ್ತು ಅಚ್ಚರಿಯಂದ್ರೆ 2012ರ ವಿಶ್ವಕಪ್ ನಲ್ಲೂ ಇಂತಹುದ್ದೇ ಒಂದು ಘಟನೆ ನಡೆದಿತ್ತು. ಸ್ವಲ್ಪ ನೆನಪು ಮಾಡಿಕೊಳ್ಳಿ.. ಈ ಹಿಂದೆ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಕೂಡ ಶತಕದ ಶತಕಕ್ಕಾಗಿ ಸುಮಾರು ಒಂದು ವರ್ಷ ಪರದಾಡಿದ್ರು. ಪ್ರತಿ ಪಂದ್ಯವನ್ನು ಆಡುವಾಗಲೂ ಸಚಿನ್ ಶತಕ ದಾಖಲಿಸುತ್ತಾರೆ ಅಂತನೇ ಬಿಂಬಿಸಲಾಗುತ್ತಿತ್ತು. ಆದ್ರೆ ಸಚಿನ್ ಪದೇ ಪದೇ ನಿರಾಸೆ ಅನುಭವಿಸುತ್ತಿದ್ರು. ಇನ್ನೇನೂ ಸಚಿನ್ ಶತಕದ ಶತಕ ದಾಖಲಿಸುವುದು ಕಷ್ಟ ಅಂತ ಅನ್ನುತ್ತಿರುವಾಗಲೇ ಸಚಿನ್ ಏಕದಿನ ಕ್ರಿಕೆಟ್ ನಲ್ಲಿ 49ನೇ ಶತಕ ದಾಖಲಿಸಿ ತನ್ನ ಶತಕದ ಶತಕವನ್ನು ಪೂರ್ಣಗೊಳಿಸಿದ್ರು.
ಅಷ್ಟೇ ಅಲ್ಲ. ಅದು ಕೂಡ ಏಷ್ಯಾಕಪ್ ನಲ್ಲೇ. 2012ರ ಏಷ್ಯಾಕಪ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಕರ್ಷಕ 114 ರನ್ ಸಿಡಿಸಿದ್ರು. ಆದ್ರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು. ವಿಶೇಷತೆ ಅಂದ್ರೆ ವಿರಾಟ್ ಕೊಹ್ಲಿ ಮೂರು ವರ್ಷದ ಬಳಿಕ ಶತಕ ಸಿಡಿಸಿ ತಂಡ ಗೆಲುವು ಸಾಧಿಸಿದ್ರೂ ಏಷ್ಯಾಕಪ್ ನಲ್ಲಿ ನಿರಾಸೆಯಿಂದ ಹಿಂತಿರುಬೇಕಾಯ್ತು. ಹಾಗೇ ಅಂದು ಸಚಿನ್ ತೆಂಡುಲ್ಕರ್ ಒಂದು ವರ್ಷದ ಬಳಿಕ ಶತಕ ಸಿಡಿಸಿದ್ರೂ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯ್ತು.
ಒಟ್ಟಿನಲ್ಲಿ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಮತ್ತು ಚೇಸಿಂಗ್ ಗಾಡ್ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಮಹೋನ್ನತ ಶತಕ ದಾಖಲಿಸಿದ್ರು. ಸಚಿನ್ ಅವರಿಗೆ ಐತಿಹಾಸಿಕ ಸಾಧನೆಗೆ ಸಾಕ್ಷಿಯಾದ್ರೆ, ವಿರಾಟ್ ಕೊಹ್ಲಿಗೆ ಐತಿಹಾಸಿಕ ಸಾಧನೆ ಮಾಡಲು ಮತ್ತೊಂದು ಮುನ್ನುಡಿಯಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.