ಏಷ್ಯಾಕಪ್ನಲ್ಲಿ (Asia Cup) ಲೀಗ್ ಲೆಕ್ಕಾಚಾರಗಳೆಲ್ಲಾ ಮುಗಿದಿವೆ. ಮೈನ್ ಲೀಗ್ನಲ್ಲಿದ್ದ 6 ತಂಡಗಳ ಪೈಕಿ 2 ತಂಡಗಳು ಮನೆ ಹಾದಿ ಹಿಡಿದಿವೆ. ಇನ್ನುಳಿದಿರುವುದು ನಾಲ್ಕೇ ನಾಲ್ಕು ತಂಡಗಳು. ಈ ನಾಲ್ಕು ತಂಡಗಳ ನಡುವೆ ಸೂಪರ್ 4 (Super 4)ಫೈಟ್ ನಡೆಯಲಿದೆ. ಪ್ರತಿಯೊಂದು ತಂಡವೂ 3 ಪಂದ್ಯಗಳನ್ನು ಆಡಲಿದೆ. ಎರಡು ಅಗ್ರ ತಂಡಗಳು ಕಪ್ಗಾಗಿ ಫೈನಲ್ ಆಡಲಿವೆ.
ಸೂಪರ್ 4ರ ಮೊದಲ ಸೂಪರ್ ಫೈಟ್ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ (Afg VS SL) ನಡುವೆ ನಡೆಯಲಿದೆ. ಶಾರ್ಜಾದಲ್ಲಿ (Sharjah) ನಡೆಯುವ ಈ ಕದನ ಸೇಡಿನ ಸಮರ. ಶ್ರೀಲಂಕಾ (Srilanka) ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ (Afghanistan) ವಿರುದ್ಧ ಹೀನಾಯ ಸೋಲು ಕಂಡಿತ್ತು. ಈಗ ರಿಟರ್ನ್ ಕೊಡುವ ಅವಕಾಶ ಲಂಕಾ ಸಿಂಹಗಳಿಗೆ ಸಿಕ್ಕಿದೆ. ಹಾಗಂತ ಅಫ್ಘಾನಿಸ್ತಾನ ಸಾಧಾರಣಾ ತಂಡವಲ್ಲ. ಲಂಕಾವನ್ನು ಬಗ್ಗು ಬಡಿದ ಮೇಲೆ ಬಾಂಗ್ಲಾದೇಶಕ್ಕೂ ನೀರು ಕುಡಿಸಿ ಅಜೇಯ ತಂಡವಾಗಿ ಈ ಫೈಟ್ಗೆ ಸಜ್ಜಾಗಿದೆ.
ಬಲಾಬಲ ನೋಡುವುದಾದರೆ ಲಂಕಾಕ್ಕೆ ಬಾಂಗ್ಲಾ ವಿರುದ್ಧದ ಜಯ ಆತ್ಮವಿಶ್ವಾಸ ತುಂಬಿದೆ. ಕುಸಾಲ್ ಮೆಂಡಿಸ್ ಮತ್ತು ಪಥುನ್ ನಿಸ್ಸಾಂಕ ಆಡಲು ನಿಂತರೆ ಔಟ್ ಮಾಡೋದು ಕಷ್ಟ. ಭಾನುಕಾ ರಾಜಪಕ್ಸ ಮತ್ತು ಚರಿತ್ ಅಸಲಂಕಾ ಸ್ಥಿರ ಆಟ ಆಡದೇ ಇರುವುದು ಚಿಂತೆಯಾದರೂ ಹೆಚ್ಚು ಟೆನ್ಷನ್ ಇಲ್ಲ. ನಾಯಕ ದಾಸುನ್ ಶನಕ, ಆಲ್ರೌಂಡರ್ ವನಿಂದು ಹಸರಂಗ, ದನುಷ್ಕಾ ಗುಣತಿಲಕ, ಚಾಮಿರ ಕರುಣಾರತ್ನೆಯಂತಹ ಆಲ್ರೌಂಡರ್ಗಳಿದ್ದಾರೆ. ಮಹೀಶ್ ತೀಕ್ಷಣ, ಮಧುಶಂಕ ಮತ್ತು ಫತಿರಣರಂತಹ ಬೌಲರ್ಗಳಿದ್ದಾರೆ.
ಅಫ್ಘಾನ್ ತಂಡವೂ ಸಖತ್ ಬಲಿಷ್ಠವಾಗಿದೆ. ಹಝರತುಲ್ಲ ಝಝೈ, ರಹಮತುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರನ್, ನಜಿಬುಲ್ಲಾ ಜದ್ರನ್, ಮೊಹಮ್ಮದ್ ನಬಿ, ರಶೀದ್ ಖಾನ್ರಂತಹ ಆಟಗಾರರು ಸವಾಲಿಗೆ ಸಿದ್ಧವಾಗಿದ್ದಾರೆ. ಕರೀಮ್ ಜನತ್, ಒಮರ್ಝಾಐ, ನವೀನ್ ಉಲ್ ಹಕ್, ಮುಜೀಬ್ ಮತ್ತು ಫರೂಕಿ ಕೂಡ ಮಿಂಚಿನ ಆಟ ಆಡ ಬಲ್ಲರು.
ಶಾರ್ಜಾ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ. ಬೌಂಡರಿಗಳು ಚಿಕ್ಕದಾಗೂ ಇವೆ. ಹೀಗಾಗಿ ಬಿಗ್ ಹಿಟ್ಟರ್ಗಳ ಬಿಗ್ ಸಿಕ್ಸರ್ಗಳೇ ಪಂದ್ಯದ ಹೈಲೈಟ್ ಆದರೂ ಆಗಬಹುದು.