Asia Cup -2022 ಟೀಮ್ ಇಂಡಿಯಾಗೆ ತಲೆಬಾಗಿದ ಹಾಂಕಾಂಗ್..! ಸ್ಕೈ- ಕಿಂಗ್ ಕೊಹ್ಲಿ ಅಜೇಯ ಅರ್ಧಶತಕ

ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ -4 ಗೆ ಪ್ರವೇಶ ಪಡೆದುಕೊಂಡಿದೆ. ಲೀಗ್ ನ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 40 ರನ್ ಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿತು.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಹಾಂಕಾಂಗ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ನೀಡುವ ಸೂಚನೆ ನೀಡಿದ್ದರು. ಈ ಹಂತದಲ್ಲಿ 21 ರನ್ ಗಳಿಸಿದ್ದ ರೋಹಿತ್ ಶರ್ಮಾ ಪೆವಿಲಿಯನ್ ಸೇರಿಕೊಂಡ್ರು. ಆದ್ರೆ ಮೊದಲ ವಿಕೆಟ್ ಗೆ 4.5 ಓವರ್ ಗಳಲ್ಲಿ 38 ರನ್ ಪೇರಿಸಿದ್ದರು.
ಆನಂತರ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್ ಗೆ 56 ರನ್ ಸೇರಿಸಿದ್ರು. ಆಗ ಕೆ.ಎಲ್. ರಾಹುಲ್ 36 ರನ್ ಗಳಿಗೆ ತನ್ನ ಹೋರಾಟವನ್ನು ಮುಗಿಸಿದ್ರು.

ಬಳಿಕ ಹಾಂಕಾಂಗ್ ಬೌಲರ್ ಗಳಿಗೆ ಬೇವರಿಳಿಸಿದ್ದು ಸೂರ್ಯ ಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ. ಬಹಳ ದಿನಗಳ ನಂತರ ಸುಂದರವಾದ ಇನಿಂಗ್ಸ್ ಕಟ್ಟಿದ್ದ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಕೂಡ ದಾಖಲಿಸಿದ್ದರು. ಇನ್ನೊಂದೆಡೆ ಸೂರ್ಯ ಕುಮಾರ್ ಯಾದವ್ ಮನಬಂದಂತೆ ಬ್ಯಾಟ್ ಬೀಸಿದ್ರು. ಅಂತಿಮವಾಗಿ ಸೂರ್ಯ ಕುಮಾರ್ ಯಾದವ್ 26 ಎಸೆತಗಳಲ್ಲಿ ಅಜೇಯ 68 ರನ್ ಸಿಡಿಸಿದ್ರು. ಇದರಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್ ಗಳಿದ್ದವು. ಅದರಲ್ಲೂ ಇನಿಂಗ್ಸ್ ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ನೊಂದಿಗೆ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ದರು.
ಮತ್ತೊಂದೆಡೆ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ ಅಜೇಯ 59 ರನ್ ದಾಖಲಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತ್ತು.

ಕಠಿಣ ಸವಾಲನ್ನು ಬೆನ್ನಟ್ಟಿದ್ದ ಹಾಂಕಾಂಗ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆರಂಭಿಕರಾದ ಯಾಸೀಮ್ ಮುರ್ಟಾಝ್ 9 ರನ್ ಮತ್ತು ನಿಝಾಕತ್ ಖಾನ್ 10 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಆದ್ರೆ ಬಾಬರ್ ಹಯಾತ್ ಅವರು ಟೀಮ್ ಇಂಡಿಯಾ ಬೌಲರ್ ಗಳನ್ನು ಅಚ್ಚರಿಗೊಳಿಸುವಂತೆ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ ಸ್ವಲ್ಪ ಸಮಯ ರೋಹಿತ್ ಶರ್ಮಾ ಗೆ ತಲೆಕೆಡಿಸಿಕೊಳ್ಳುವಂತೆ ಕೂಡ ಬ್ಯಾಟ್ ಬೀಸಿದ್ದರು. ಇವರಿಗೆ ಕಿಂಚಿತ್ ಶಾ ಉತ್ತಮ ಸಾಥ್ ನೀಡಿದ್ರು. ಬಾಬರ್ ಹಯಾತ್ 41 ರನ್ ಗಳಿಸಿದ್ರೆ, ಕಿಂಚಿತ್ ಶಾ 30 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಅಂತಿಮವಾಗಿ ಹಾಂಕಾಂಗ್ ತಂಣಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತ್ತು. ಝಿಶಾನ್ ಆಲಿ ಅಜೇಯ 26 ರನ್ ಹಾಗೂ ಸ್ಕಾಟ್ ಮೆಕ್ ಕ್ಯಾಚ್ನ್ ಅಜೇಯ 16 ರನ್ ಗಳಿಸಿದ್ರು. 40 ರನ್ ಗಳಿಂದ ಸೋತ ಹಾಂಕಾಂಗ್ ತಂಡ ಮುಂದಿನ ಪಂದ್ಯದಲ್ಲಿ ಪಾಕ್ ತಂಡವನ್ನು ಎದುರಿಸಲಿದೆ.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.