Asia cup 2022 – ಶಾಹೀನ್ ಆಫ್ರಿದಿ ಔಟ್… ಪಾಕ್ ಗೆ ಭಾರೀ ಹಿನ್ನಡೆ..!
ಏಷ್ಯಾಕಪ್ ಟೂರ್ನಿಗೆ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆಘಾತವಾಗಿದೆ. ತಂಡದ ವೇಗದ ಬೌಲರ್ ಶಾಹೀನ್ ಆಫ್ರಿದಿ ಅವರು ಗಾಯದಿಂದಾಗಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಕಳೆದ ತಿಂಗಳು ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಶಾಹೀನ್ ಆಫ್ರಿದಿ ಅವರು ಮೊಣಕಾಲಿಗೆ ನೋವು ಮಾಡಿಕೊಂಡಿದ್ದರು. ಆದ್ರೆ ಆಫ್ರಿದಿ ಇನ್ನೂ ಕೂಡ ನೋವಿನಿಂದ ಚೇತರಿಸಿಕೊಂಡಿಲ್ಲ. ಅಲ್ಲದೆ ಇನ್ನು ಕೂಡ ಕನಿಷ್ಠ 4ರಿಂದ ಆರು ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ.
2021ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮಣಿಸುವಲ್ಲಿ ಶಾಹೀನ್ ಆಫ್ರಿದಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮೆನ್ ಗಳಾದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿಯವರ ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಈ ಬಾರಿಯ ಏಷ್ಯಾಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ಮುಖಾಮುಖಿಯಾಗಲಿವೆ.