Asia Cup 2022 – ಬಲಿಷ್ಠ ಟೀಮ್ ಇಂಡಿಯಾ… ಏಷ್ಯಾಕಪ್ ನಲ್ಲಿ ದುರ್ಬಲ ಇಂಡಿಯಾ..!
ಏಷ್ಯಾಕಪ್ ನಲ್ಲಿ ಟೀಮ್ ಇಂಡಿಯಾದ ಗರ್ವಭಂಗವಾಗಿದೆ. ಚುಟುಕು ಕ್ರಿಕೆಟ್ ನ ಬಲಿಷ್ಠ ತಂಡ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿರುವ ಟೀಮ್ ಇಂಡಿಯಾಗೆ ಏಷ್ಯಾಕಪ್ ಟೂರ್ನಿ ತಕ್ಕ ಪಾಠವನ್ನು ಕಲಿಸಿದೆ.
ಸಾಲು ಸಾಲು ಪ್ರಯೋಗಗಳಿಂದ ಆಗಿರುವ ಎಡವಟ್ಟು ಎದ್ದು ಕಾಣುತ್ತಿದೆ. ಟೀಮ್ ಕಾಂಬಿನೇಷನ್ ಕೊರತೆಯಂತೂ ಟೀಮ್ ಇಂಡಿಯಾದ ಹಿನ್ನಡೆಗೆ ಪ್ರಮುಖ ಕಾರಣವಾಗುತ್ತಿದೆ. ವಿಶ್ವದ ಶ್ರೇಷ್ಠ ಆಟಗಾರರು ತಂಡದಲ್ಲಿದ್ರೂ ಅದು ಹೆಸರಿಗೆ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಮಹತ್ವದ ಟೂರ್ನಿಗಳಲ್ಲಿ ಎಡವುತ್ತಿರುವ ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ರೆ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ಇದೇ ಪರಿಸ್ಥಿತಿಯನ್ನು ಕಾಣಬೇಕಾಗುತ್ತದೆ.
ಹಾಲಿ ಚಾಂಪಿಯನ್, ಈ ಬಾರಿಯ ಟೂರ್ನಿಯ ಫೆವರೀಟ್ ತಂಡವಾಗಿದ್ದ ಟೀಮ್ ಇಂಡಿಯಾವನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸುಲಭವಾಗಿ ಸೋಲಿಸಿವೆ. ಟೀಮ್ ಇಂಡಿಯಾದ ಪ್ರದರ್ಶನವನ್ನು ನೋಡಿದಾಗ ಇದೇನಾ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಸನ್ನದ್ಧಗೊಂಡಿರುವ ತಂಡ ಅಂತ ಅಚ್ಚರಿಯು ಆಗುತ್ತದೆ.
ನಿಜ, ಜಸ್ಪ್ರಿತ್ ಬೂಮ್ರಾ ಗಾಯಗೊಂಡು ಟೂರ್ನಿಗೆ ಆಯ್ಕೆಯಾಗಿರಲಿಲ್ಲ. ರವೀಂದ್ರ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿದ್ದಾರೆ. ಆವೇಶ್ ಖಾನ್ ಕೂಡ ಗಾಯಗೊಂಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಗೆ ವೇಗದ ಬೌಲರ್ ಗಳ ಕೊರತೆ ಎದ್ದು ಕಾಣುತ್ತಿತ್ತು.
ಹಾಗೇ ನೋಡಿದ್ರೆ, ದೀಪಕ್ ಚಾಹರ್ ಮತ್ತು ಶಾರ್ದೂಲ್ ಥಾಕೂರ್, ಪ್ರಸಿದ್ಧ್ ಕೃಷ್ಣ, ಹರ್ಷೇಲ್ ಪಟೇಲ್ ಅವರನ್ನು ಯಾಕೆ ಕೈಬಿಟ್ರೂ ಅನ್ನೋದು ಅರ್ಥನೇ ಆಗುತ್ತಿಲ್ಲ.
ಇನ್ನು ಹಾಲಿ ತಂಡದ ಹನ್ನೊಂದರ ಬಳಗದ ಆಯ್ಕೆಯೂ ಏನು ಪ್ಲಾನ್ ಆಂತನೇ ಗೊತ್ತಾಗುತ್ತಿಲ್ಲ. ದೀಪಕ್ ಹೂಡಾ ಅವರನ್ನು 11ರ ಬಳಗದಲ್ಲಿ ಆಯ್ಕೆ ಮಾಡಿಕೊಂಡ್ರೂ ಆಲ್ ರೌಂಡರ್ ಆಗಿ ಬಳಸಿಕೊಳ್ಳುತ್ತಿಲ್ಲ. ಒಂದು ವೇಳೆ ಬ್ಯಾಟ್ಸ್ ಮೆನ್ ಆಗಿ ಬಳಸಿಕೊಳ್ಳುವುದಾದ್ರೆ ದಿನೇಶ್ ಕಾರ್ತೀಕ್ ಗೆ ಅವಕಾಶ ನೀಡಬಹುದಿತ್ತು. ಮತ್ತೊಂದೆಡೆ ರಿಷಬ್ ಪಂತ್ ಬೇeವಾಬ್ದಾರಿ ಹೊಡೆತಗಳು ಈ ಟೂರ್ನಿಯಲ್ಲೂ ಮುಂದುವರಿದಿದೆ. ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯಪ್ರಮುಖ ಪಂದ್ಯಗಳಲ್ಲಿ ಕೈಕೊಟ್ರು. ವಿರಾಟ್ ಕೊಹ್ಲಿ ಫಾರ್ಮ್‍ಗೆ ಬಂದ್ರೂ ಲಂಕಾ ವಿರುದ್ಧ ಎಡವಿಬಿದ್ರು. ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡಲಿಲ್ಲ. ಬೌಲಿಂಗ್ ನಲ್ಲಿ ಅಷ್ಟಕ್ಕಷ್ಟೇ. ಚಾಹಲ್ ಪರಿಣಾಮಕಾರಿಯಾಗಲಿಲ್ಲ. ಭುವನೇಶ್ವರ್ ಕುಮಾರ್ ಮತ್ತು ಆರ್ಶಾದೀಪ್ ಸಿಂಗ್ ಕೂಡ ಲಯ ಕಂಡುಕೊಳ್ಳಲು ವಿಫಲರಾದ್ರು.
ಹೀಗೆ ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸಿತ್ತು. ಏಷ್ಯಾಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಟೂರ್ನಿಗೆ ಮುನ್ನ ಬಲಿಷ್ಠ ತಂಡ ಎಂದು ಬಿಂಬಿಸಿಕೊಂಡಿದ್ದ ಟೀಮ್ ಇಂಡಿಯಾ ಟೂರ್ನಿಯಲ್ಲಿ ದುರ್ಬಲ ತಂಡವಾಗಿ ಹೊರಬಿದ್ದಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಈ ಸೋಲಿನಿಂದ ಪಾಠ ಕಲಿಸಿದೆ. ಇನ್ನಾದ್ರೂ ಪ್ರಯೋಗಗಳನ್ನು ನಿಲ್ಲಿಸಿ. ಬಲಿಷ್ಠ ತಂಡವನ್ನು ಆಯ್ಕೆ ಮಾಡಿ ಆಟಗಾರರಿಗೆ ಅವಕಾಶ ಕೊಡಿ. ಅದನ್ನು ಬಿಟ್ಟು ಪ್ರತಿ ಪಂದ್ಯಕ್ಕೆ ಹೊಸ ಹೊಸ ಪ್ರಯೋಗ ಮಾಡ್ಕೊಂಡು ತಂಡದಲ್ಲಿ ಗೊಂದಲವನ್ನುಂಟು ಮಾಡೋದು ಬೇಡ.