ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್(ASIA CUP 2022) ಟೂರ್ನಿಯ ʼಡು ಆರ್ ಡೈʼ(‘do or die’) ಮ್ಯಾಚ್ನಲ್ಲಿ ಇಂದು ಶ್ರೀಲಂಕಾ(SRI LANKA) ಹಾಗೂ ಬಾಂಗ್ಲಾದೇಶ(BANGLADESH) ತಂಡಗಳು ಬಲಿಷ್ಠ ಫೈಟ್ ನಡೆಸಲು ಮುಖಾಮುಖಿ ಆಗುತ್ತಿವೆ. ಟಾಸ್ ಗೆದ್ದಿರುವ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ದುಬೈ ಇಂಟರ್ನ್ಯಾಷಿನಲ್ ಮೈದಾನಲ್ಲಿ ನಡೆಯುವ ಇವತ್ತಿನ ಪಂದ್ಯಕ್ಕೆ ಎರಡು ಟೀಮ್ಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಆಫ್ಘಾನಿಸ್ತಾನ್ ವಿರುದ್ಧ ಸೋಲಿನ ಆಘಾತ ಕಂಡಿತ್ತು. ಆದ್ದರಿಂದ ಇವತ್ತಿನ ಪಂದ್ಯ ಎರಡು ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಇವತ್ತಿನ ಪಂದ್ಯವನ್ನ ಗೆಲ್ಲುವ ತಂಡ ಟೂರ್ನಿಯ ಸೂಪರ್-4 ಹಂತಕ್ಕೇರಲಿದೆ.
ಬಾಂಗ್ಲಾ ಹುಲಿಗಳು ಹಾಗೂ ಲಂಕಾ ಸಿಂಹಗಳ ನಡುವಿನ ಕಾದಾಟ ಸಾಕಷ್ಟು ಕುತೂಹಲ ಮೂಡಿಸಿವೆ. ಗೆಲುವಿನ ಅನಿವಾರ್ಯತೆ ಇರುವ ಎರಡು ತಂಡಗಳು ಹಿಂದಿನ ತಪ್ಪುಗಳಿಂದ ಪಾಠ ಕಲಿತು ಅಖಾಡಕ್ಕೆ ಇಳಿಯಲು ಸಜ್ಜಾಗಿವೆ. ಆಫ್ಘಾನಿಸ್ಥಾನದ ವಿರುದ್ಧ ಸ್ಪಿನ್ ದಾಳಿಗೆ ತತ್ತರಿಸಿದ್ದ ಬಾಂಗ್ಲಾದೇಶ, ಇಂದು ಲಂಕಾ ಸ್ಪಿನ್ನರ್ಗಳ ಸವಾಲನ್ನ ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಅದೇ ರೀತಿ ಛಲ ಬಿಡದೆ ಹೋರಾಡುವ ಬಾಂಗ್ಲಾ ಟೈಗರ್ಸ್, ಶ್ರೀಲಂಕಾವನ್ನ ಹೇಗೆ ಕಟ್ಟಿಹಾಕ್ತಾರೆ ಎಂಬುದು ನಿರೀಕ್ಷೆ ಮೂಡಿಸಿದೆ. ಇಂದಿನ ಪಂದ್ಯಕ್ಕಾಗಿ ಎರಡು ತಂಡಗಳು ಕೆಲವೊಂದು ಬದಲಾವಣೆ ಮಾಡಿಕೊಂಡಿವೆ.
ಸಂಭಾವ್ಯ ತಂಡಗಳು:
ಬಾಂಗ್ಲಾದೇಶ: ಶಬ್ಬಿರ್ ರಹಮಾನ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ಅಫೀಫ್ ಹೊಸೈನ್, ಮಹಮ್ಮದುಲ್ಲಾ, ಮೊಸದ್ದೆಕ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್.
ಶ್ರೀಲಂಕಾ: ಪತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ವನಿಂದು ಹಸರಂಗ, ದಸುನ್ ಶನಕ(ನಾಯಕ), ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಅಸಿತ ಫೆರ್ನಾಂಡೊ.