Asia Cup 2022 – ಲಂಕಾದಿಂದ ಏಷ್ಯಾಕಪ್ ಶಿಫ್ಟ್ ? ಹಾಗಿದ್ರೆ ಎಲ್ಲಿ ನಡೆಯುತ್ತೆ…?

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಶ್ರೀಲಂಕಾದಲ್ಲಿ ನಡೆಯುವುದು ಅನುಮಾನ. ಹೀಗಾಗಿ ಯುನೈಡೆಟ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ಹೇಳಿದ್ದಾರೆ.
ಸದ್ಯ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಾಗರೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯ ಅಸ್ಥಿರತೆ ಇದೆ. ಹೀಗಾಗಿ ಪ್ರತಿಷ್ಠಿತ ಟೂರ್ನಿಯನ್ನು ಆಯೋಜಿಸುವುದು ಕಷ್ಟ ಎಂದು ಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ತಿಳಿಸಿದ್ದಾರೆ.
ಆಗಸ್ಟ್ 26ರಿಂದ ಸೆಪ್ಟಂಬರ್ 11ರವರೆಗೆ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯು ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಪೂರ್ವ ತಯಾರಿಯೂ ಆಗಲಿದೆ.
ಟೂರ್ನಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ಹಾಂಕಾಂಗ್, ಸಿಂಗಾಪುರ, ಕುವೈಟ್ ಮತ್ತು ಯುಎಇ ಅರ್ಹತಾ ಸುತ್ತಿನಲ್ಲಿ ಕಾದಾಟ ನಡೆಸಲಿವೆ. ಇಲ್ಲಿ ಅಗ್ರ ಸ್ಥಾನ ಪಡೆದ ಒಂದು ತಂಡ ಪ್ರಧಾನ ಸುತ್ತಿನಲ್ಲಿ ಆಡಲಿದೆ.
ಇನ್ನುಳಿದಂತೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಕಣಕ್ಕಿಳಿಯಲಿವೆ.

ಇನ್ನು, ಶ್ರೀಲಂಕಾದಲ್ಲಿ ಈಗಾಗಲೇ ಆಸ್ಟ್ರೇಲಿಯಾ ದ್ವೀಪಕ್ಷಿಯ ಸರಣಿಯನ್ನು ಆಡಿದೆ. ಭಾರತ ಮಹಿಳಾ ತಂಡ ಕೂಡ ಪಂದ್ಯಗಳನ್ನು ಆಡಿದೆ. ಹಾಗೇ ಪ್ರಸ್ತುತ ಪಾಕಿಸ್ತಾನ ಕೂಡ ಲಂಕಾ ವಿರುದ್ದ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಟೂರ್ನಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಸುಗಮವಾಗಿಯೇ ನಡೆದಿದೆ. ಆದ್ರೆ ಏಷ್ಯಾಕಪ್ ಪ್ರತಿಷ್ಠಿತ ಟೂರ್ನಿಯಾಗಿರುವುದರಿಂದ ಲಂಕಾದ ರಾಜಕೀಯ ಬಿಕ್ಕಟ್ಟು ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಏಷ್ಯಾ ಕಪ್ ಟೂರ್ನಿಯ ಆತಿಥ್ಯವನ್ನು ಬದಲಾಯಿಸುವುದರ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷ ಜೈ ಶಾ ನೇತೃತ್ವದಲ್ಲಿ ಸದ್ಯದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಈ ನಡುವೆ, ಏಷ್ಯಾ ಕಪ್ ಟೂರ್ನಿ ಶ್ರೀಲಂಕಾದಲ್ಲಿ ನಡೆಯಬೇಕು ಎಂಬುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಶಯವಾಗಿದೆ.
ನಮ್ಮ ಮೊದಲ ಆದ್ಯತೆ ಏಷ್ಯಾ ಕಪ್ ಟೂರ್ನಿ ಶ್ರೀಲಂಕಾದಲ್ಲಿ ನಡೆಯಬೇಕು ಎಂಬುದು. ಒಂದು ವೇಳೆ ಈ ಟೂರ್ನಿ ಲಂಕಾದಲ್ಲಿ ನಡೆಯದಿದ್ರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಆರ್ಥಿಕವಾಗಿ ನಷ್ಟವಾಗಬಹುದು. ಲಂಕಾ ಪರಿಸ್ಥಿತಿ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಪ್ರತಿನಿಧಿಗಳು ಗಮನಿಸುತ್ತಿದ್ದಾರೆ ಎಂದು ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೈಸಲ್ ಹೆಸ್ನೇನ್ ಹೇಳಿದ್ದಾರೆ.