ಟೀಮ್ ಇಂಡಿಯಾದ ಸ್ಟಾರ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಕಪಿಲ್ ದೇವ್ ಅವರ ದಾಖಲೆ ಅಳಿಸಿ, ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದ ಅಶ್ವಿನ್, ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ.
ನಾಯಕ ದಿಮುತ್ ಕರುಣಾರತ್ನೆ ಮತ್ತು ಕುಶಾಲ್ ಮೆಂಡಿಸ್ ಅವರ ಪ್ರಬಲ ಜೊತೆಯಾಟವನ್ನು ಮುರಿಯುವ ಮೂಲಕ ಅಶ್ವಿನ್ ಇಂದು ಮೊದಲ ಸೆಷನ್ನಲ್ಲಿ ಡೇಲ್ ಸ್ಟೇನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಶ್ರೀಲಂಕಾದ ಈ ಇಬ್ಬರು ಆಟಗಾರರ ನಡುವೆ 97 ರನ್ಗಳ ಜೊತೆಯಾಟ ನಡೆದಿತ್ತು. ಅಶ್ವಿನ್ ಎಸೆತದಲ್ಲಿ ಕುಶಾಲ್ ಮೆಂಡಿಸ್ ವಿಕೆಟ್ ಹಿಂದೆ ಕ್ಯಾಚ್ ನೀಡಿದರು. ಮೆಂಡಿಸ್ 54 ರನ್ ಗಳಿಸಿ ಔಟಾದರು. ಇದಾದ ಬಳಿಕ ಒಟ್ಟು 105 ರನ್ ಗಳಿಸಿದ್ದ ಶ್ರೀಲಂಕಾಕ್ಕೆ ಅಶ್ವಿನ್ ಖೆಡ್ಡಾ ತೋಡಿದರು. ಧನಂಜಯ್ ಡಿ ಸಿಲ್ವಾ (4) ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಈ ವಿಕೆಟ್ ಬಿದ್ದ ತಕ್ಷಣ, ಅಶ್ವಿನ್ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ತಲುಪಿದರು.
ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಮುತ್ತಯ್ಯ ಮುರಳೀಧರನ್ – 133 ಪಂದ್ಯಗಳು, 800 ವಿಕೆಟ್
ಶೇನ್ ವಾರ್ನ್ – 145 ಪಂದ್ಯಗಳು, 708 ವಿಕೆಟ್
ಜೇಮ್ಸ್ ಆಂಡರ್ಸನ್ – 169 ಪಂದ್ಯಗಳು, 640 ವಿಕೆಟ್
ಅನಿಲ್ ಕುಂಬ್ಳೆ – 132 ಪಂದ್ಯಗಳು, 619 ವಿಕೆಟ್
ಗ್ಲೆನ್ ಮೆಕ್ಗ್ರಾತ್ – 124 ಪಂದ್ಯಗಳು, 563 ವಿಕೆಟ್
ಸ್ಟುವರ್ಟ್ ಬ್ರಾಡ್ – 152 ಪಂದ್ಯಗಳು, 537 ವಿಕೆಟ್
ಕರ್ಟ್ನಿ ವಾಲ್ಷ್ – 132 ಪಂದ್ಯಗಳು, 519 ವಿಕೆಟ್
ರವಿಚಂದ್ರನ್ ಅಶ್ವಿನ್ – 86 ಪಂದ್ಯಗಳು, 440 ವಿಕೆಟ್