ಬ್ಯಾಟ್ಸಮನ್ಗಳ ಜವಾಬ್ದಾರಿಯುತ ಆಟದ ಜೊತೆಗೆ ಬೌಲಿಂಗ್ನಲ್ಲೂ ಮೋಡಿ ಮಾಡಿದ ಆಸೀಸ್ ಆಟಗಾರರು, ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಸ್ಟ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.
ಕರಾಚಿಯಲ್ಲಿ ನಡೆಯುತ್ತಿರುವ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿರುವ ಆಸ್ಟ್ರೇಲಿಯಾ ಮೂರನೇ ದಿನವೂ ಅದ್ಭುತ ಪ್ರದರ್ಶನ ನೀಡಿತು. ಮೊದಲ ಇನ್ನಿಂಗ್ಸ್ನಲ್ಲಿ 556/9ಕ್ಕೆ ಡಿಕ್ಲೇರ್ ಮಾಡಿಕೊಂಡ ಕಾಂಗರೂ ಪಡೆ ಬೌಲಿಂಗ್ನಲ್ಲೂ ಪ್ರಾಬಲ್ಯ ಮೆರೆಯಿತು. ಪಾಕಿಸ್ತಾನ ತಂಡವನ್ನ ಮೊದಲ ಇನ್ನಿಂಗ್ಸ್ನಲ್ಲಿ 148 ರನ್ಗಳಿಗೆ ಕಟ್ಟಿಹಾಕುವ ಮೂಲಕ 408 ರನ್ಗಳ ಬೃಹತ್ ಮುನ್ನಡೆ ಪಡೆಯಿತು.
ಅಲ್ಪಮೊತ್ತಕ್ಕೆ ಕುಸಿದ ಪಾಕಿಸ್ತಾನಕ್ಕೆ ಫಾಲೋ-ಆನ್ ನೀಡದೆ, 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ನಂತರ ಜೊತೆಯಾದ ಉಸ್ಮಾನ್ ಖವಾಜ(35*) ಹಾಗೂ ಮಾರ್ನಸ್ ಲಬುಸ್ಚೆಗ್ನೆ(37*) ತಂಡಕ್ಕೆ ಚೇತರಿಕೆ ನೀಡಿದರು. 3ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 81 ರನ್ಗಳಿಸಿದ್ದು, 489 ರನ್ಗಳ ಮುನ್ನಡೆ ಹೊಂದಿದೆ.
ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಎದುರಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನದ ಬ್ಯಾಟ್ಸಮನ್ಗಳು ಮಿಚೆಲ್ ಸ್ಟಾರ್ಕ್(29/3) ಹಾಗೂ ಮಿಚೆಲ್ ಸ್ವೀಪ್ಸನ್(32/2) ದಾಳಿಗೆ ತತ್ತರಿಸಿದರು. ಪರಿಣಾಮ 148ಕ್ಕೆ ಆಲೌಟ್ ಆದ ಪಾಕಿಸ್ತಾನ, ಮೊದಲ ಇನ್ನಿಂಗ್ಸ್ನಲ್ಲಿ ಭಾರೀ ಹಿನ್ನಡೆ ಅನುಭವಿಸಿತು. ಇನ್ನಿಂಗ್ಸ್ ಆರಂಭದಲ್ಲೇ ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟ ಸ್ಟಾರ್ಕ್, ಪ್ರಮುಖ ಮೂರು ವಿಕೆಟ್ ಪಡೆದರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸ್ಪಿನ್ ಮೋಡಿ ಮಾಡಿದ ಸ್ವೀಪ್ಸನ್, 2 ವಿಕೆಟ್ ಪಡೆದುಕೊಂಡರು. ಇವರಿಗೆ ಸಾಥ್ ನೀಡಿದ ಪ್ಯಾಟ್ ಕಮ್ಮಿನ್ಸ್, ನಾಥನ್ ಲಿಯಾನ್ ಹಾಗೂ ಕೆಮರೂನ್ ಗ್ರೀನ್ ತಲಾ 1 ವಿಕೆಟ್ ಪಡೆದರು. ಪಾಕಿಸ್ತಾನದ ಪರ ಬಾಬರ್ ಆಜ಼ಂ(36) ರನ್ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಇದಕ್ಕೂ ಮುನ್ನ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತನ್ನ ಮ್ಯಾರಥಾನ್ ಇನ್ನಿಂಗ್ಸ್ಗೆ ವಿರಾಮ ಹಾಡಿತು. ಆ ಮೂಲಕ 189 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 556 ರನ್ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. 3ನೇ ದಿನದಾಟ ಆರಂಭಿಸಿದ ಪ್ಯಾಟ್ ಕಮ್ಮಿನ್ಸ್(34*) ಹಾಗೂ ಮಿಚೆಲ್ ಸ್ವೀಪ್ಸನ್(15*) 10ನೇ ವಿಕೆಟ್ಗೆ ಮುರಿಯದ 51 ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಪಾಕ್ ಪರ ಫಹೀಮ್ ಅಶ್ರಫ್ ಹಾಗೂ ಸಜಿದ್ ಖಾನ್ ತಲಾ 2 ವಿಕೆಟ್ ಪಡೆದರು.