ಅತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಆಸ್ಟ್ರೇಲಿಯಾಕ್ಕೆ ಆಘಾತ ಎದುರಾಗಿದೆ. ತಂಡದ ಅನುಭವಿ ಸ್ಪಿನ್ನರ್ ಆಸ್ಟನ್ ಅಗರ್, ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಸೀಸ್ ಭರ್ಜರಿ ಗೆಲುವು ಸಾಧಿಸಿತ್ತು. ಇದೇ ಉತ್ಸಾಹದಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ಕಾಂಗರೂ ಪಡೆ ಮತ್ತೆ ಗಾಯಾಳುಗಳ ಸಮಸ್ಯೆ ಎದುರಿಸುವಂತಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ಆಸ್ಟನ್ ಅಗರ್, ಸೈಡ್ ಸ್ಟ್ರೈನ್ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಆಸೀಸ್ ಪಡೆಯ ಪ್ರಮುಖ ಸ್ಪಿನ್ ಅಸ್ತ್ರವಾಗಿರುವ ನ್ಯಾಥನ್ ಲಿಯಾನ್ ಅವರಿಗೆ ಸಾಥ್ ನೀಡುವ ಹಾಗೂ ಸ್ಪಿನ್ ಬೌಲರ್ ಗಳಿಗೆ ಅನುಕೂಲವಾಗಿರುವ ಗಾಲೆ ಮೈದಾನದಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆ ಹೊಂದಿದ್ದ ಆಸ್ಟನ್ ಅಗರ್, ನಿರಾಸೆ ಅನುಭವಿಸುವಂತಾಗಿದೆ.
ಆಸ್ಟನ್ ಅಗರ್ ಲಂಕಾ ವಿರುದ್ಧದ ವೈಟ್ ಬಾಲ್ ಸರಣಿ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆದರೆ ಮೊದಲ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಮಿಚೆಲ್ ಸ್ವೆಪ್ಸನ್ ಅವರನ್ನ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿತ್ತು. ತನಗೆ ದೊರೆತ ಅವಕಾಶ ಸರಿಯಾಗಿ ಬಳಸಿಕೊಂಡ ಸ್ವೆಪ್ಸನ್, ಉತ್ತಮ ಬೌಲಿಂಗ್ ಮೂಲಕ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ನಡುವೆ ಎರಡನೇ ಟೆಸ್ಟ್ ವೇಳೆಗೆ ಕಮ್ ಬ್ಯಾಕ್ ಮಾಡುವ ಆಸ್ಟನ್ ಅಗರ್, ಈವರೆಗೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಆಸೀಸ್ ತಂಡದ ಆರ್ಥೊಡೆಕ್ಸ್ ಸ್ಪಿನ್ನರ್ ಆಸ್ಟನ್ ಅಗರ್ ಅಲಭ್ಯತೆ ಹಿನ್ನೆಲೆಯಲ್ಲಿ ಅನುಭವಿ ಆಫ್ ಸ್ಪಿನ್ನರ್ ಜಾನ್ ಹೊಲ್ಯಾಂಡ್, ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ದ ಸ್ವೆಪ್ಸನ್, ಎರಡನೇ ಪಂದ್ಯಕ್ಕೆ ತಂಡದಲ್ಲಿ ಮುಂದುವರಿಯುವ ನಿರೀಕ್ಷೆ ಹೊಂದಿದ್ದಾರೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ, ಜುಲೈ 8ರಿಂದ ಆರಂಭಗೊಳ್ಳಲಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ, ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿದೆ.