ಆ್ಯಶಸ್ ಸರಣಿಯ ಹೋರಾಟಕ್ಕೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ರಣ ರೋಚಕ ಆರಂಭ ನೀಡಿವೆ. ಆಸ್ಟ್ರೇಲಿಯಾ ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದೆ. ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ನಾಯಕತ್ವ ವಹಿಸಿಕೊಂಡ ಮೊದಲ ಟೆಸ್ಟ್ನ ಮೊದಲ ದಿನವೇ ಇಂಗ್ಲೆಂಡ್ ಕುಸಿತಕ್ಕೆ ಕಾರಣವಾಗಿದ್ದಾರೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್ ಯಾರ್ಕರ್ ಇಂಗ್ಲೆಂಡ್ ಓಪನರ್ ರೋರಿ ಬರ್ನ್ಸ್ ವಿಕೆಟ್ ಎಗರಿಸಿತ್ತು. ಹ್ಯಾಜಲ್ವುಡ್ 6 ರನ್ಗಳಿಸಿದ್ದ ಡೇವಿಡ್ ಮಲಾನ್ ಮತ್ತು ಖಾತೆಯನ್ನೇ ತೆರೆಯದ ಕ್ಯಾಪ್ಟನ್ ಜೋ ರೂಟ್ ವಿಕೆಟ್ ಪಡೆದು ಶಾಕ್ ನೀಡಿದರು. ಇಷ್ಟು ಸಾಲದು ಅನ್ನುವಂತೆ ಪ್ಯಾಟ್ ಕಮಿನ್ಸ್ 5 ರನ್ಗಳಿಸಿದ್ದ ಬೆನ್ ಸ್ಟೋಕ್ಸ್ ವಿಕೆಟ್ ಉರುಳಿಸಿದರು.
ಹಸಿಬ್ ಹಮೀದ್ ಮತ್ತು ಮತ್ತು ಒಲಿ ಪೋಪ್ 30 ರನ್ಗಳ ಜೊತೆಯಾಟ ತಂದುಕೊಟ್ಟರು. ಆದರೆ ದಾಳಿಗಿಳಿದ ಕಮಿನ್ಸ್ 25 ರನ್ಗಳಿಸಿದ್ದ ಹಮೀದ್ ವಿಕೆಟ್ ಪಡೆದರು. ಪೋಪ್ ಮತ್ತು ಜೋಸ್ ಬಟ್ಲರ್ ನಡುವೆ 52 ರನ್ಗಳ ಜೊತೆಯಾಟ ಬಂದಿತ್ತು. ಇನ್ನೇನು ಇಂಗ್ಲೆಂಡ್ ಚೇತರಿಕೆಯ ಹಾದಿಯಲ್ಲಿದೆ ಅನ್ನುವಾಗ ಸ್ಟಾರ್ಕ್ 39 ರನ್ಗಳಿಸಿದ ಬಟ್ಲರ್ ವಿಕೆಟ್ ಪಡೆದರು. 35 ರನ್ಗಳಿಸಿದ ಪೋಪ್ ಕ್ರಿಸ್ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. ರಾಬಿನ್ಸನ್ ಮತ್ತು ಮಾರ್ಕ್ವುಡ್ ಕೂಡ ಕಮಿನ್ಸ್ ಮುಂದೆ ಬ್ಯಾಟ್ ಎತ್ತಲಾಗಲಿಲ್ಲ. ಕೊನೆಗೆ 21 ರನ್ಗಳಿಸಿದ್ದ ವೋಕ್ಸ್ ವಿಕೆಟ್ ಕೂಡ ಕಮಿನ್ಸ್ ಪಾಲಾಯಿತು. ಇಂಗ್ಲೆಂಡ್ ಟೀ ವಿರಾಮಕ್ಕೂ ಮುನ್ನವೇ 147 ರನ್ಗಳಿಗೆ ಆಲೌಟ್ ಆಯಿತು. ದಿನದ ಅಂತಿಮ ಸೆಷನ್ ಆಟ ಮಳೆಯಿಂದ ರದ್ದಾಯಿತು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹ್ಯಾಜಲ್ವುಡ್ ತಲಾ 2 ವಿಕೆಟ್ ಪಡೆದರು.